ಪ್ರಜ್ವಲ್ ಪ್ರಕರಣ: ರಾಜಕೀಯಕ್ಕೆ ನತದೃಷ್ಟ ಹೆಣ್ಮಕ್ಕಳು ಬಲಿ!

82

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ನೂರಾರು ಹೆಣ್ಮಕ್ಕಳ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಈಗ ಸಂಪೂರ್ಣವಾಗಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ದಿನಬೆಳಗಾದರೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನಾಯಕರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಆದರೆ, ವಿದೇಶಕ್ಕೆ ಪರಾರಿಯಾಗಿರುವ ಆರೋಪಿ ಪ್ರಜ್ವಲ್ ಮಾತ್ರ ಯಾರಿಗೂ ಸಿಗ್ತಿಲ್ಲ.

ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಬಿಜೆಪಿ ಮುಖಂಡ ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದೆ ಅಂದ. ಇದೀಗ ದೇವರಾಜೇಗೌಡ ಬಂಧನವಾಗಿದೆ. ಇವರು ಡಿಸಿಎಂ ಡಿ.ಕೆ ಶಿವಕುಮಾರ್ ಸಚಿವರಾದ ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕಾ ಖರ್ಗೆ ಹಣದ ಆಫರ್ ಮಾಡಿದ್ದರು. ಡಿಕೆಶಿ 100 ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು ಎಂದಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಆರೋಪ, ಪ್ರತ್ಯಾರೋಪ ನಡೆಯುತ್ತಲೇ ಇದೆ.

ಅಧಿಕಾರ ಬಲ, ಹಣ ಬಲ, ತೋಳ್ಬಲ ಇರುವ ರಾಜಕೀಯ ನಾಯಕರ ಕೈಯಲ್ಲಿ ಸಿಕ್ಕ ನೃತದೃಷ್ಟಿಯ ಪಾಡೇನು ಅನ್ನೋ ಪ್ರಶ್ನೆ ಮೂಡಿದೆ. ವಿಡಿಯೋದಲ್ಲಿ ಕಂಡು ಬಂದ ಹೆಣ್ಮಕ್ಕಳ ಮನೆ ಪರಿಸ್ಥಿತಿ ಏನು? ಮೊದಲೇ ಪ್ರಜ್ವಲ್ ರೇವಣ್ಣನ ಕೈಯಲ್ಲಿ ಸಿಕ್ಕು ನರಳಾಡಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಹೆಣ್ಮಕ್ಕಳ ಬಗ್ಗೆ ಯಾವ ರಾಜಕೀಯ ನಾಯಕರ ವಿಚಾರ ಮಾಡುತ್ತಿಲ್ಲ. ಸರ್ಕಾರ ರಚನೆ ಮಾಡಿರುವ ಎಸ್ಐಟಿ ವಿರುದ್ಧವೂ ಅಸಮಾಧಾನ ಹೊರ ಹಾಕುತ್ತಾ, ನಿತ್ಯ ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಇದೆಲ್ಲವೂ ನೋಡಿದರೆ ಎಂದಿನಂತೆ ಇಲ್ಲಿ ಬಡವರು, ಮಧ್ಯಮ ವರ್ಗದ ಹೆಣ್ಮಕ್ಕಳು ಬಲಿಪಶುಗಳು ಆಗುತ್ತಾರೆ ಎನ್ನುವುದು ಗೋಚರಿಸುತ್ತಿದೆ.

ಹಾಸನ ಜಿಲ್ಲೆಯ ಹೆಣ್ಮಕ್ಕಳು ಅಂದರೆ ಕೆಟ್ಟ ದೃಷ್ಟಿಯಿಂದ ನೋಡುವಂತೆ ಮಾಡಿದ ಜನಪ್ರತಿನಿಧಿಗಳಿಗೆ, ಅವರನ್ನು ಮತ್ತಷ್ಟು ಅವಮಾನಿಸುವಂತೆ ರೀಲ್ಸ್ ಮಾಡುವವರಿಗೆ ನಿಜಕ್ಕೂ ಮನುಷ್ಯತ್ವ ಇದೇನಾ? ಉಳ್ಳವರು ಬೆತ್ತಲೆ ಕುಣಿದರೂ ಫ್ಯಾಶನ್ ಆಗುತ್ತೆ. ಶ್ರಮಿಕ ವರ್ಗ ಒಂಚೂರು ಹರಿದ ಬಟ್ಟೆ ಹಾಕಿಕೊಂಡ್ರೂ ಮಾನ ಮರ್ಯಾದೆ ಕಳೆಯುವ ಹೊತ್ತಿನಲ್ಲಿ, ಪ್ರಜ್ವಲ್ ರೇವಣ್ಣನ ಕಾಮ ದಾಹಕ್ಕೆ ಬಲಿಯಾದವರ ಜೀವನ ನಿಜಕ್ಕೂ ಊಹೆಗೆ ನಿಲುಕದ್ದು. ಈಗ್ಲಾದರೂ ಇದರಲ್ಲಿ ರಾಜಕೀಯ ಮಾಡುವುದು ಬಿಟ್ಟು ತನಿಖೆ ನಡೆಯುವ ತನಕ ತುಟಿಗಳಿಗೆ ಬೀಗ ಹಾಕಿದರೆ ಒಳ್ಳೆಯದು.




error: Content is protected !!