ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸಿಂದಗಿಯಲ್ಲಿ ಪ್ರತಿಭಟನೆ

111

ಪ್ರಜಾಸ್ತ್ರ ಸುದ್ದಿ

ಸಿಂದಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ಸರ್ಕಲ್ ಬಳಿ ಸೇರಿದ ನಾಯಕರು, ಕಾರ್ಯಕರ್ತರು ಎತ್ತಿನಗಾಡಿಯಲ್ಲಿ ಬೈಕ್ ಇಟ್ಟು, ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.

ಈ ವೇಳೆ ಮಾತನಾಡಿದ ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ, ಸುಳ್ಳು ಗ್ಯಾರೆಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಜನರಿಗೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿನ ಸೋಲಿನಿಂದ ಹತಾಷೆಗೊಂಡು ಈ ರೀತಿ ನಡೆದುಕೊಳ್ಳುತ್ತಿದ್ದು, ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಅಂದು ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್ ನವರು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ಗ್ಯಾರೆಂಟಿಗಳಿಂದ ಜನರಿಗೆ ಮೋಸ ಮಾಡಿದ್ದು, ಮುಂದಿನ ದಿನಗಳಲ್ಲಿ ಗ್ಯಾರೆಂಟಿಗಳು ನಿಲ್ಲಲಿವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಹೇಳಿದರು. ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಪುರಸಭೆ ಜೆಡಿಎಸ್ ಸದಸ್ಯ ರಾಜಣ್ಣ ನಾರಾಯಣಕರ ಸೇರಿ ಇತರರು ಮಾತನಾಡಿದರು. ನಂತರ ಶಿರೇಸ್ತೆದಾರ ರೋಡಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.




error: Content is protected !!