70ರ ದಶಕದಲ್ಲಿ ಅರಸು ತೋರಿದ ಧೈರ್ಯ ಈಗಿನ ‘ಕೈ’ ನಾಯಕರಿಗೇಕಿಲ್ಲ?

986

ಈ ಹೊತ್ತಿನ ರಾಜ್ಯ ರಾಜಕೀಯ ಸ್ಥಿತಿಯನ್ನ ನೋಡಿದ್ರೆ ಯಾವ ಪಕ್ಷಗಳಿಗೂ ಮತ್ತೊಮ್ಮೆ ಚುನಾವಣೆಗೆ ಹೋಗುವ ಧೈರ್ಯವಿಲ್ಲ. ಅದೇಕೆ ಅನ್ನೋದನ್ನ ಆಮೇಲೆ ನೋಡೋಣ. ಈಗಿನ ಕಾಂಗ್ರೆಸ್ ಪರಿಸ್ಥಿತಿ ನೋಡಿದ್ರೆ, 1969ರಲ್ಲಿ ಇಬ್ಭಾಗವಾದ ಕಾಂಗ್ರೆಸ್ ಮನೆಯಂತೆ ಕಾಣ್ತಿದೆ. ಸಂಸ್ಥಾ ಕಾಂಗ್ರೆಸ್ ಹಾಗೂ ಇಂದಿರಾ ಕಾಂಗ್ರೆಸ್ ಎಂದು ಇಬ್ಭಾಗವಾಯ್ತು. ಸಂಸ್ಥಾ ಕಾಂಗ್ರೆಸ್ ನಲ್ಲಿ ಲವ ಕುಶರಂತೆ ವೀರೇಂದ್ರ ಪಾಟೀಲ ಹಾಗೂ ರಾಮಕೃಷ್ಣ ಹೆಗಡೆ ನಾಯಕರಾಗಿದ್ರು. ಇಂದಿರಾ ಕಾಂಗ್ರೆಸ್ ನಲ್ಲಿ ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ಎಚ್ ಸಿದ್ಧವೀರಪ್ಪ ಹಾಗೂ ಪಿಎಸ್ ಪಿಯನ್ನು ತೊರೆದು ಬಂದ ಯುವ ನಾಯಕ ಎಸ್.ಎಂ ಕೃಷ್ಣ ಇದ್ರು.

ದೇವರಾಜು ಅರಸು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣ

1970ರ ಆರಂಭದಲ್ಲಿ ನಡೆದ ಎಕ್ಸ್ ಪೋ ಹಗರಣ, ಸಿಎಂ ಆಗಿದ್ದ ವೀರೇಂದ್ರ ಪಾಟೀಲ ಹಾಗೂ ಅರ್ಥಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರನ್ನ ಹಿಂಡಿಹಿಪ್ಪೆ ಮಾಡಿತು. ಅದು ಮುಂದೆ ಎಷ್ಟರ ಮಟ್ಟಿಗೆ ಹೋಯ್ತು ಅಂದ್ರೆ 1971ರಲ್ಲಿ ಮಧ್ಯಂತರ ಚುನಾವಣೆ ಬರುತ್ತೆ ಅನ್ನೋ ಮಾತುಗಳು ಕೇಳಿ ಬಂದ್ವು. ಮುಂದೆ ವೀರೇಂದ್ರ ಪಾಟೀಲ ಸರ್ಕಾರ ಪತನವಾಯ್ತು. ಆಗ ಬಹುಮತವಿದ್ದ ಇಂದಿರಾ ಕಾಂಗ್ರೆಸ್ ಗೆ ಸರ್ಕಾರ ರಚನೆ ಮಾಡುವ ಅವಕಾಶ ಒದಗಿ ಬಂತು. ಆದ್ರೆ, ದೇವರಾಜ ಅರಸು ಅನ್ನೋ ಚಾಣಾಕ್ಷ ಅದರಿಂದ ಹಿಂದೆ ಸರಿದು, ಚುನಾವಣೆಗೆ ಹೋಗುವ ನಿರ್ಧಾರ ಮಾಡಿದ್ರು.

ವೀರೇಂದ್ರ ಪಾಟೀಲ

ಅದೇ ಟೈಂನಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ಸಹ ಘೋಷಣೆಯಾಗಿತ್ತು. 1971ರಲ್ಲಿ ಇಂದಿರಾ ಕಾಂಗ್ರೆಸ್ ರಾಜ್ಯದ 27 ಲೋಕಸಭೆ ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ಇದರ ಹಿಂದೆ ಇದ್ದಿದ್ದು ದೇವರಾಜ ಅರಸು ಅವರು. 1972ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವಂತಾಯ್ತು. ಕಾರಣ, ಸರ್ಕಾರ ರಚನೆ ಮಾಡಿದ್ರೆ ವಿರೋಧ ಪಕ್ಷದ ನಾಯಕರಾಗಿದ್ದ ಎಚ್.ಸಿದ್ಧವೀರಪ್ಪನವರು ಸಿಎಂ ಆಗ್ತಿದ್ರು. ಅವರು ಇಂದಿರಾ ಗಾಂಧಿಗೆ ಆಪ್ತರಾಗಿದ್ರು. ಇನ್ನೂ ಮೇಲಾಗಿ ಎಚ್.ಸಿದ್ಧವೀರಪ್ಪನವರು ಲಿಂಗಾಯತ ಸಮುದಾಯಕ್ಕೆ ಸೇರಿದ್ರು. ಅಂದಿನ ಟೈಂನಲ್ಲಿ ರಾಜ್ಯದ ಚುಕ್ಕಾಣೆ ಹಿಡಿದವರು ಲಿಂಗಾಯತರು ಹಾಗೂ ಒಕ್ಕಲಿಗರು.(ಈಗ್ಲೂ ಅಂಥಾ ಯಾವ ದೊಡ್ಡಮಟ್ಟದ ವ್ಯತ್ಯಾಸ ಕಾಣ್ತಿಲ್ಲ) ಇದನ್ನ ಮಣಿಸುವುದು ಅರಸು ಪ್ಲಾನ್ ಆಗಿತ್ತು. ಆ ಹೊತ್ತಿನಲ್ಲಿ ಅರಸುಗೆ ಅಷ್ಟಾಗಿ ರಾಜಕೀಯ ವರ್ಚಸ್ಸು ಇರ್ಲಿಲ್ಲ.

ಇಂದಿರಾ ಟೀಂನಲ್ಲಿ ಅರಸು

ಬಹುಮತವಿಲ್ಲದಿದ್ರೂ ಸರ್ಕಾರ ರಚನೆ ಮಾಡಲು ಓಡಾಡುವ ಹೊತ್ತಿನಲ್ಲಿ (ಈಗ್ಲೂ ಅಂಥಾ ಪ್ರಕರಣಗಳು ನಡೆದಿವೆ. 2018ರಲ್ಲಿ ಬಿಎಸ್ ವೈ ಮಾಡಿಕೊಂಡ ಯಡವಟ್ಟು ಕಣ್ಮುಂದೆಯಿದೆ) ಅರಸು ನಿರ್ಧಾರಕ್ಕೆ ಉಳಿದ ನಾಯಕರು ಹಿಡಿ ಶಾಪ ಹಾಕಿದ್ರು. ದಡ್ಡ ಅಂತೆಲ್ಲ ಬೈದ್ರು. ಇದನ್ನೆಲ್ಲ ಗಮನಿಸ್ತಿದ್ದ ಅವರು ಯಾವುದಕ್ಕೂ ಉತ್ತರ ಕೊಡದೆ ತಮ್ಮ ಕೆಲಸ ಮಾಡ್ತಿದ್ರು. ಮಧ್ಯಂತರ ಚುನಾವಣೆಯ ಫಲಿತಾಂಶ 1972ರ ಮಾರ್ಚ್ ಮೊದಲ ವಾರದಲ್ಲಿ ಬಂತು. ಅದರಲ್ಲಿ ಅರಸು ಏನು ಪ್ಲಾನ್ ಮಾಡಿದ್ರೋ ಅದು ಸಕ್ಸಸ್ ಆಗಿತ್ತು. ಅವರು ಹಿಂದುಳಿದ, ದುರ್ಬಲ, ದಲಿತ ಹಾಗೂ ಅಲ್ಪಸಂಖ್ಯಾತರ ಹೊಸ ಮುಖಗಳಿಗೆ ಮಣೆ ಹಾಕಿದ್ರು. ಅದರಲ್ಲಿ 133 ಮಂದಿ ಈ ಸಮುದಾಯಗಳಿಗೆ ಸೇರಿದ್ರು. ಉಳಿದ 90 ಸ್ಥಾನವನ್ನ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣರಿಗೆ ಹಂಚಿದ್ರು. ಇಂದಿರಾ ಕಾಂಗ್ರೆಸ್ ಗೆದ್ದ 163 ಸ್ಥಾನಗಳಲ್ಲಿ 92 ಮಂದಿ ಅರಸು ಆಯ್ಕೆ ಮಾಡಿದ ಹೊಸ ಮುಖಗಳಿದ್ವು.

ರಾಮಕೃಷ್ಣ ಹೆಗಡೆ

ಮುಂದಿನ ಸಿಎಂ ಯಾರು ಅನ್ನೋ ದೊಡ್ಡ ಚರ್ಚೆ ಇಂದಿರಾ ಕಾಂಗ್ರೆಸ್ ನಾಯಕರಲ್ಲಿ ನಡೆಯಿತು. ಆದ್ರೆ, ಅಂತಿಮ ನಿರ್ಧಾರ ಏನಿದ್ರೂ ಇಂದಿರಾ ಮೇಡಂ ಅವರೆ ತೆಗೆದುಕೊಳ್ಳಬೇಕು ಅಂತಾ ಎಲ್ಲರ ಅಭಿಪ್ರಾಯವಾಗಿತ್ತು. ಪ್ರಧಾನಿ ಇಂದಿರಾ ಗಾಂಧಿ ಬಾಂಗ್ಲಾ ಪ್ರವಾಸದಲ್ಲಿದ್ರು. ಎಲ್ಲರ ಲೆಕ್ಕಾಚಾರ ಏನಾಗಿತ್ತು ಅಂದ್ರೆ, ಇಂದಿರಾ ಮೇಡಂ ಲಿಂಗಾಯತ ಇಲ್ಲವೆ ಒಕ್ಕಲಿಗ ಸಮುದಾಯದ ನಾಯಕರನ್ನ ಆಯ್ಕೆ ಮಾಡ್ತಾರೆ ಅನ್ನೋದು. ಆದ್ರೆ, ಅವರು ಸೂಚಿಸಿದ ಹೆಸರು ಒನ್ ಆ್ಯಂಡ್ ಓನ್ಲಿ ದೇವರಾಜ ಅರಸು ಅವರದ್ದು. ಈ ಮೂಲಕ ಮೊದಲ ಬಾರಿಗೆ ರಾಜ್ಯ ರಾಜಕೀಯ ಇತಿಹಾಸದಲ್ಲಿ ಜಾತಿಮೂಲದ ರಾಜನೀತಿಯನ್ನ ಮುರಿದು ಹೊಸ ಶಕೆ ಆರಂಭವಾಯ್ತು.

ಧರ್ಮಸ್ಥಳ ಭೇಟಿ ಸಮಯದಲ್ಲಿ

ಆದ್ರೆ, ಅರಸು ಅವರನ್ನ ಹತ್ತಿರದಿಂದ ನೋಡಿದ, ಅವರ ಆಡಳಿತ, ಚಾಣಾಕ್ಷತನ ಕಂಡವರು ಇಂದಿನ ರಾಜ್ಯ ಕಾಂಗ್ರೆಸ್ ನಲ್ಲಿದ್ರೂ, ಮತ್ತೊಮ್ಮೆ ಚುನಾವಣೆಗೆ ಹೋಗುವ ಧೈರ್ಯ ಯಾಕೆ ಮಾಡ್ತಿಲ್ಲಂದ್ರೆ, ಅವರು ಮಾಡಿಕೊಂಡ ಯಡವಟ್ಟುಗಳು. ಜೆಡಿಎಸ್ ಸ್ನೇಹ, ಕೈ ಪಕ್ಷದೊಳಗೆ ಸೂಕ್ಷ್ಮವಾಗಿ ನಡ್ತೀರುವ ಲಿಂಗಾಯತ, ಒಕ್ಕಲಿಗ ಹಾಗೂ ಬ್ರಾಹ್ಮಣರ ಹಿಡಿತದ ಕಚ್ಚಾಟ. ಸಿದ್ಧರಾಮಯ್ಯಗೆ ಮತ್ತೊಮ್ಮೆ ಸಿಎಂ ಸ್ಥಾನ ನೀಡಬಾರದು ಅನ್ನೋದು. ಇಷ್ಟು ಮಾತ್ರವಲ್ಲದೇ ಪ್ರಸ್ತುತ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರನ್ನ ಹೊರತು ಪಡಿಸಿ, ಹಿಂದುಳಿದ ಸಮುದಾಯಕ್ಕೆ ಸೇರಿದ ಸಮರ್ಥ ಹಾಗೂ ಬಲಿಷ್ಠ ನಾಯಕರು ಯಾರಿಲ್ಲ. ಅವರಿಗೆ ಅಧಿಕಾರ ನೀಡಲು ದೇವೇಗೌಡರು ಒಪ್ಪುತ್ತಿಲ್ಲ.

ಲಿಂಗಾಯತ ಸಮುದಾಯಕ್ಕೆ ಸೇರಿದ ಎಂ.ಬಿ ಪಾಟೀಲ, ಹೆಚ್.ಕೆ ಪಾಟೀಲ, ಈಶ್ವರ ಖಂಡ್ರೆ, ಒಕ್ಕಲಿಗ ಸಮುದಾಯದ ಡಿಕೆ ಶಿವಕುಮಾರ, ಬ್ರಾಹ್ಮಣ ಸಮುದಾಯದ ದಿನೇಶ ಗುಂಡೂರಾವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇವರೆಲ್ಲರ ಕಣ್ಣು ಸಿಎಂ ಗಾದಿ ಮೇಲಿದೆ ಅನ್ನೋದು ತೆಗೆದು ಹಾಕುವಂತಿಲ್ಲ. ಆದ್ರೆ, ಸಿದ್ದರಾಮಯ್ಯನವರನ್ನ ಬಿಟ್ಟು ಈಗ ಚುನಾವಣೆ ಎದುರಿಸುವ ಧೈರ್ಯ ಇವರ್ಯಾರು ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಮೈತ್ರಿ ಸರ್ಕಾರ ಪತನವಾಗದಂತೆ ನೋಡಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡ್ತಿದ್ದಾರೆ. ಐದು ವರ್ಷದ ಬಳಿಕ ತಮ್ಮ ಆಟ ನಡೆಸಲು ಸಾಧ್ಯವೆನ್ನೋದು ಇವರ ಲೆಕ್ಕಾಚಾರ. ಅರಸುವರಿಗಿದ್ದ ಸಾಮಾಜಿಕ ಬದ್ಧತೆ, ಹಿಂದುಳಿದ, ದುರ್ಬಲರ ಸಮುದಾಯದ ಬಗೆಗಿನ ಕಾಳಜಿ ಇವರಿಗೆ ಇಲ್ಲ. ಬರೀ ಸ್ವಾರ್ಥ, ಅಧಿಕಾರ ದಾಹ. ಹೀಗಾಗಿ 2006ರ ಫಲಿತಾಂಶ ಮರುಕಳಿಸ್ತಿದೆ.

ಆಕರಗ್ರಂಥ: ಬಹುರೂಪಿ ಅರಸು ಪುಸ್ತಕ, ಲೇಖಕರು ವಡ್ಡರ್ಸೆ ರಘುರಾಮ ಶೆಟ್ಟಿ




error: Content is protected !!