ದೇಶಭಕ್ತರನ್ನು ಹುಟ್ಟುಹಾಕಿದ ಸಂಸ್ಥೆ ಭಾರತ ಸೇವಾದಳ: ಆನಂದ ಮಾಡಗಿ

76

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಶಿಕ್ಷಕರ ಸಮುದಾಯ ಸೇವಾ ಮತ್ತು ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವ ಮೂಲಕ ಭಾರತ ಸೇವಾದಳವನ್ನು ಉಳಿಸಿ ಬೆಳೆಸಬೇಕು ಎಂದು ಶಿಕ್ಷಣ ಸಂಯೋಜಕ ಆನಂದ ಮಾಡಗಿ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಮಂಗಳವಾರ, ವಿಜಯಪುರ ಜಿಲ್ಲಾ ಸಮಿತಿ ಭಾರತ ಸೇವಾದಳ, ತಾಲೂಕು ಸಮಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಇವರುಗಳ ಸಂಯೋಗದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಭಾರತ ಸೇವಾದಳ ಶಿಕ್ಷಕರ ಪುನಃಶ್ಚೇತನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸೇವಾದಳ ಸ್ವಾತಂತ್ರ‍್ಯ ಹೋರಾಟಗಾರರು ಮತ್ತು ದೇಶಭಕ್ತರನ್ನು ಹುಟ್ಟು ಹಾಕಿದ ಸಂಸ್ಥೆ. ಸ್ವಾತಂತ್ರ‍್ಯ ಚಳುವಳಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಸಾಥ್ ಕೊಟ್ಟ ಏಕೈಕ ಸಂಸ್ಥೆ ಎಂದರು.

ತಾಲೂಕು ಸಮಿತಿ ಮಹಿಳಾ ಪ್ರತಿನಿಧಿ ಶ್ಯಾಮಲಾ ಮಂದೇವಾಲಿ ಮಾತನಾಡಿ, ಸೇವಾದಳದ ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ, ಶಿಸ್ತು, ಸೇವಾ ಮನೋಭಾವನೆ, ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಾರತ ಸೇವಾದಳ ತಾಲೂಕು ಅಧ್ಯಕ್ಷ ಚಂದ್ರಶೇಖರ.ಎಸ್ ನಾಗೂರ ಮಾತನಾಡಿ, ಶಿಕ್ಷಕರು ಭಾರತ ಸೇವಾದಳವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯನ್ನು ಹೊತ್ತರೆ ಮಾತ್ರ ಈ ಸಂಸ್ಥೆ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಾಮದೇವ ಚವ್ಹಾಣ, ಜಿಲ್ಲಾ ಸಮಿತಿ ಸದಸ್ಯ ಶಾಂತೇಶ ಕುಂಬಾರ, ಮುಖ್ಯ ಶಿಕ್ಷಕ ಆರ್.ಬಿ.ಸಂಗಮೇಶ ಮಾತನಾಡಿದರು.

ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಧಿನಾಯಕ ಡಿ.ಸಿ.ಜಾಧವ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ಶಿಕ್ಷಕ ಆರ್.ಆರ್.ನಿಂಬಾಳ್ಕರ ಸ್ವಾಗತಿಸಿದರು. ಸಂಪನ್ಮೂಲ ಶಿಕ್ಷಕ ಎಸ್.ಆರ್. ಪಾಟೀಲ ವಂದಿಸಿದರು. ಎಸ್,ಬಿ, ಚಾಗಶೆಟ್ಟಿ, ಸಂಗಣ್ಣ ಜೇರಟಗಿ ಸೇರಿದಂತೆ 50ಕ್ಕೂ ಹೆಚ್ಚು ಸೇವಾದಳದ ಶಿಕ್ಷಕರು ಸೇರಿ ಅನೇಕರಿದ್ದರು.




error: Content is protected !!