ಬಿಜೆಪಿಯವರ ಕಾಲದಲ್ಲೇ ಜಮೀನು ಕೊಟ್ಟಿದ್ದು: ಸಿಎಂ ಸಿದ್ದರಾಮಯ್ಯ

68

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆದ ಸೈಟು ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಜಮೀನು ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ 50:50 ಅನುಪಾತದಲ್ಲಿ ಜಮೀನು ಕೊಡುವುದಾಗಿ ಮುಡಾ ಹೇಳಿತ್ತು. ಆದರೆ, ಜಮೀನು ಕೊಡದೆ ಸೈಟ್ ಮಾಡಿ ಹಂಚಿದರು. ಆಗ ನಮಗೆ ಜಮೀನು ಇಲ್ಲದ ಹಾಗಾಯ್ತು. ಅದಕ್ಕೆ ನಮಗೆ ಬೇರೆ ಕಡೆ ಜಮೀನು ಕೊಟ್ಟರು. ಅದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ಅದು ಅಲ್ಲದೆ 1 ಎಕರೆ 15 ಗುಂಟೆ ಜಮೀನು ಬಾಮೈದ ತೆಗೆದುಕೊಂಡಿದ್ದ. ಅವನು ನನ್ನ ಹೆಂಡ್ತಿಗೆ ಅರಿಶಿನ, ಕುಂಕುಮ ರೀತಿ ಉಡುಗರೆಯಾಗಿ ಕೊಟ್ಟಿದ್ದಾನೆ. ಇದು ನಾನು ಅಧಿಕಾರದಲ್ಲಿದ್ದಾಗ ಖರೀದಿಸಿದ್ದಲ್ಲ ಎಂದರು.

ಕಾಂಗ್ರೆಸ್ ನಾಯಕ ಲಕ್ಷ್ಮಣ ಸಹ ಈ ಬಗ್ಗೆ ಮಾತನಾಡಿದ್ದು, 1988ರಲ್ಲಿ ದೇವನೂರು ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. 2007ರಲ್ಲಿ ಕಾನೂನು ಪ್ರಕಾರ 50:50ರ ಅನುಪಾತದಲ್ಲಿ ಪರಿಹಾರವಾಗಿ 71,457 ಚದರ ಅಡಿ ಜಾಗ ಕೊಡಬೇಕಿತ್ತು. ಆದರೆ, 38,284 ಚದರ ಅಡಿ ಕೊಟ್ಟಿದ್ದಾರೆ. ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಕೊಟ್ಟಿದ್ದಾರೆ. ಇದರಿಂದ ಪಾರ್ವತಿ ಅವರಿಗೆ ನಷ್ಟವಾಗಿದೆ. ಇದು ಸಹ 2021ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕೊಡಲಾಗಿದೆ. ಪುಕ್ಕಟೆಯಾಗಿ ಮುಡಾ ಕೊಟ್ಟಿಲ್ಲವೆಂದು ಹೇಳಿದ್ದಾರೆ.

ಇನ್ನು ನಗರಾಭಿವೃದ್ಧಿ ಸಚಿವ ಹೆಚ್.ಸಿ ಮಹಾದೇವಪ್ಪ, ಸೈಟು ಹಂಚಿಕೆಯಲ್ಲಿ ಅಕ್ರಮವಾಗಿಲ್ಲ. ಅಧಿಕಾರ ವರ್ಗಾವಣೆ ಶಿಕ್ಷೆ ಅಲ್ಲ. ಅದೊಂದು ಪ್ರಕ್ರಿಯೆ. ತನಿಖಾ ವರದಿ ಬಂದ ಮೇಲೆ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗುತ್ತೆ ಎಂದಿದ್ದಾರೆ.




error: Content is protected !!