ದರ್ಶನ್ ಬಂಧನದ ಬಗ್ಗೆ ಪೊಲೀಸ್ ಆಯುಕ್ತರು ಹೇಳಿದ್ದೇನು?

89

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿದ್ದು ಅವರು ಹೇಳಿರುವ ಮಾಹಿತಿ ಇಲ್ಲಿದೆ.

ಜೂನ್ 9ರಂದು ಕಾಮಾಕ್ಷಿಪಾಳ್ಯದಲ್ಲಿ ಅಪರಿಚಿತ ಶವ ಸಿಕ್ಕಿತ್ತು. ಆತನ ದೇಹದ ಮೇಲಿದ್ದ ಗಾಯಗಳನ್ನು ನೋಡಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಆಧಾರ ಹಾಗೂ ಇತರೆ ತಾಂತ್ರಿಕ ಆಧಾರದ ಮೇಲೆ ಆತ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂದು ತಿಳಿದು ಬಂತು.

ತನಿಖೆಯಲ್ಲಿ ಕನ್ನಡ ಚಿತ್ರರಂಗದ ನಟನ ಪಾತ್ರವಿದೆ ಎಂದು ಗೊತ್ತಾಗಿ ನಟ ಹಾಗೂ ಆತನ ಸಹಚರರು ಸೇರಿ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರೇಣುಕಾಸ್ವಾಮಿ ದರ್ಶನ್ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಮೆಸೇಜ್ ಕಳಿಸಿದ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಚಿತ್ರದುರ್ಗ ಮೂಲದ ಬೆಸ್ಕಾಂ ನಿವೃತ್ತ ನೌಕರನ ಮಗನಾಗಿರುವ ರೇಣುಕಾಸ್ವಾಮಿ ಎಂಬಾತ ಅಪೋಲೋ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಇವನು ಕೂಡ ದರ್ಶನ್ ಅಭಿಮಾನಿಯಂತೆ. ಕೆಟ್ಟ ಕಾಮೆಂಟ್, ಮೆಸೇಜ್ ವಿಚಾರವಾಗಿ ಆತನನ್ನು ಜೂನ್ 8ರಂದು ಅಪಹರಣ ಮಾಡಲಾಗಿದೆಯಂತೆ.

ಬೆಂಗಳೂರಿಗೆ ಕರೆದುಕೊಂಡು ಬಂದು ಆತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದ್ದು ಆತ ಮೃತಪಟ್ಟಿದ್ದಾನೆ. ಕಾಮಾಕ್ಷಿಪಾಳ್ಯದ ಸತ್ವ ಅಪಾರ್ಟ್ ಮೆಂಟ್ ಹತ್ತಿರದ ಮೋರಿಯಲ್ಲಿ ಶವ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಘಟನೆ ಹೇಗೆ ನಡೆಯಿತು? ಇದರಲ್ಲಿ ನಟ ದರ್ಶನ್ ಪಾತ್ರವೇನು? ರೇಣುಕಾಸ್ವಾಮಿ ಮೃತಪಟ್ಟಿದ್ದು ಹೇಗೆ? ಇದರ ಹಿಂದಿನ ಕಾರಣ ಏನು ಅನ್ನೋದು ತನಿಖೆಯಿಂದ ತಿಳಿದು ಬರಲಿದೆ.




error: Content is protected !!