ಪ್ರಜಾಸ್ತ್ರ ಸುದ್ದಿ
ಮುಂಜಾನೆಯ ಟಿಫನ್ ಮಾಡಬೇಕು ಎಂದರೆ ಹತ್ತಾರು ವಿಧದ ಅಡುಗೆ ನೆನಪಿಗೆ ಬರುತ್ತೆ. ಆದರೆ, ದಿನಾಲೂ ಒಂದೇ ತರಹದ ರುಚಿ ತಿಂದು ಸಾಕಾಗಿರುತ್ತೆ. ಅಲ್ಲದೆ ಇಂದಿನ ಜಂಕ್ ಫುಡ್ ಬೆನ್ನು ಹತ್ತಿದ ಜನಕ್ಕೆ ಆರೋಗ್ಯಯುತವಾದ ಅಡುಗೆ ಯಾವುದು ಅನ್ನೋದು ಮರೆಯುತ್ತಿದ್ದಾರೆ. ಇನ್ನು ಕೆಲವರು ನಿತ್ಯ ಹೊಸದೊಂದು ಪ್ರಯತ್ನ ಮಾಡಿ ರುಚಿ ರುಚಿಯಾದ ಅಡುಗೆ ಮಾಡುತ್ತಾರೆ. ಅದರಲ್ಲೂ ದೋಸೆ ಎಂದರೆ ಎಲ್ಲರ ಬಾಯಿಯಲ್ಲೂ ನೀರು ಬರುತ್ತೆ. ಯಾಕಂದರೆ ನೂರಾರು ಬಗೆಯ ದೋಸೆ ಮಾಡಬಹುದು.
ಅಕ್ಕಿಹಿಟ್ಟಿನ ದೋಸೆ, ರವೆ ದೋಸೆ, ರಾಗಿ ದೋಸೆ ಹೀಗೆ ಹಲವು ವಿಧಗಳಿವೆ. ನಿಮಗೆ ಉತ್ತರ ಕರ್ನಾಟಕದ ವಿಶೇಷ ಜೋಳ-ಗೋಧಿ ಹಿಟ್ಟಿನ ದೋಸೆ ಗೊತ್ತಾ? ಇದು ಆರೋಗ್ಯಕ್ಕೂ ಒಳ್ಳೆಯದು. ಮಾಡುವುದಕ್ಕೂ ಸುಲಭ ಹಾಗೂ ಕಡಿಮೆ ಸಮಯ ತೆಗೆದುಕೊಳ್ಳುತ್ತೆ. ಹಾಗಾದರೆ ಈ ಜೋಳ-ಗೋಧಿ ದೋಸೆ ಮಾಡುವುದು ಹೇಗೆ ಅನ್ನೋದು ಇಲ್ಲಿದೆ ಓದಿ..
ಜೋಳದ ಹಿಟ್ಟು, ಗೋಧಿ ಹಿಟ್ಟು, ಸಣ್ಣ ರವೆ ಅಥವ ಬಾಂಬೆ ರವೆಯನ್ನು ನೀರಿನಲ್ಲಿ ಕಲಸಿಕೊಳ್ಳಬೇಕು. ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕುಟ್ಟಿದ ಹಸಿಮೆಣಸಿನಕಾಯಿ, ಜೀರಿಗೆ, ಅರಿಶಿಣಪುಡಿ, ಕೊತ್ತಂಬರಿ ಹಾಗೂ ಉಪ್ಪು ಇದೆಲ್ಲವನ್ನು ಕಲಿಸಿದ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ ಸುಮಾರು 20 ನಿಮಿಷ ಇಡಬೇಕು. ನಂತರ ದೋಸೆಯನ್ನು ಮಾಡಿಕೊಳ್ಳಬಹುದು. ಇದರೊಂದಿಗೆ ಆಲುಗಡ್ಡೆ ಪಲ್ಯ, ಕೊಬ್ಬರಿ ಚಟ್ನಿ ಅಥವ ಶೇಂಗಾ ಚಟ್ನಿ ಮತ್ತು ತುಪ್ಪದೊಂದಿಗೆ ತಿನ್ನಬಹುದು.