ಪ್ರಜಾಸ್ತ್ರ ಸುದ್ದಿ
ನಾಡಿನ ಪ್ರತಿಯೊಂದು ಭಾಗದಲ್ಲಿ ಅಲ್ಲಿಯದ್ದೆಯಾದ ವಿಶಿಷ್ಟ ಜೀವನ ಶೈಲಿ ಇರುತ್ತೆ. ಅದೇ ರೀತಿ ಉತ್ತರ ಕರ್ನಾಟಕದ ಜೀವನ ಶೈಲಿಯೂ ಬಲು ವಿಶೇಷ. ಅದರಂತೆ ಇಲ್ಲಿನ ಅಡುಗೆಯ ರುಚಿ ಸಹ ರಾಷ್ಟ್ರ ಮಟ್ಟದಿಂದ ಹಿಡಿದು ವಿದೇಶದವರೆಗೂ ಪ್ರಸಿದ್ಧಿ. ವಿಜಯಪುರ, ಬಾಗಲಕೋಟೆ ಭಾಗದಲ್ಲಿ ಮಾಡುವ ಚಟ್ನಿಗಳಲ್ಲಿ ಹಸಿಹುಣಸಿ ಚಟ್ನಿ ತುಂಬಾ ವಿಶೇಷವಾದದ್ದು. ಯಾಕಂದರೆ, ಇದನ್ನು ವರ್ಷಪೂರ್ತಿ ಇಟ್ಟುಕೊಂಡು ತಿನ್ನಬಹುದು.
ಹಸಿಹುಣಸಿ ಚಟ್ನಿ ಮಾಡುವ ವಿಧಾನ:
ಹಸಿಹುಣಿಸಿ, ಒಣಗಿದ ಕೆಂಪು ಮೆಣಸಿನಕಾಯಿ ಹಾಗೂ ಅರಿಶಿಣ ಕೊಂಬನ್ನು ಮೂರು ದಿನಗಳ ಕಾಲ ನೀರಲ್ಲಿ ನೆನಸಿ ಇಡಬೇಕು. ನಂತರ ಬಳ್ಳೂಳ್ಳಿ, ಹರಳು ಉಪ್ಪು, ಮೆಂತ್ಯಕಾಳು, ಸ್ವಲ್ಪ ಲವಂಗ, ಚಕ್ಕಿಯನ್ನು ಮಿಶ್ರಣಮಾಡಿ ಚೆನ್ನಾಗಿ ಕುಟ್ಟಬೇಕು. ಮೂರು ದಿನಗಳ ಕಾಲ ನೆನಸಿಟ್ಟ ಹಸಿಹುಣಿಸಿ, ಒಣ ಕೆಂಪು ಮೆಣಸಿನಕಾಯಿ, ಅರಿಶಿಣ ಕೊಂಬಿನ ಜೊತೆಗೆ ಮಿಶ್ರಣ ಮಾಡಿ ರುಬ್ಬುವ ಕಲ್ಲಿನಲ್ಲಿ ಹದವಾಗಿ ಅರೆಯಬೇಕು. ಇಲ್ಲಿ ಯಾವುದೇ ಕಾರಣಕ್ಕೂ ಮಿಕ್ಸರ್ ಬಳಕೆ ಮಾಡಬಾರದು. ನುಣ್ಣಗೆ ರುಬ್ಬಿದ ಬಳಿಕ ಹುಣಸಿ ಚಿಟ್ನಿ ಸಿದ್ಧವಾಗುತ್ತೆ.
ವರ್ಷಪೂರ್ತಿ ಇಟ್ಟರು ಕೆಡುವುದಿಲ್ಲ:
ಹಸಿಹುಣಸಿ ಚಟ್ನಿಯ ವಿಶೇಷತೆಗಳಲ್ಲಿ ಇದರ ಗುಣಮಟ್ಟವೂ ಒಂದು. ಇದರ ಸ್ವಾದ ಎಷ್ಟೊಂದು ಇರುತ್ತೆ ಅಂದರೆ ಚಟ್ನಿಗೆ ಒಂದಿಷ್ಟು ಎಣ್ಣೆ ಹಾಕಿ, ಬಿಸಿ ರೊಟ್ಟಿಯೊಂದಿಗೆ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು. ವರ್ಷಾನುಗಟ್ಟಲೆ ಕೆಡದೆ ಇರುವುದರಿಂದ ನಿಮಗೆ ಯಾವಾಗ ಬೇಕು ಆವಾಗ ತಿನ್ನಬಹುದು. ಹಿಂದಿನ ಕಾಲದಲ್ಲಿ ಬಡವರಿಗೆ ನಿತ್ಯ ಪಲ್ಯ, ಸಾಂಬಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರೊಟ್ಟಿಯೊಂದಿಗೆ ಹಸಿಹುಣಸಿ ಚಟ್ನಿಯನ್ನು ಹಚ್ಚಿಕೊಂಡು ಊಟ ಮಾಡುತ್ತಿದ್ದರು. ಇವತ್ತಿನ ಜನರಿಗೆ ಇದರ ರುಚಿ ತಿಳಿದಿಲ್ಲ. ಕೆಲವು ಊರುಗಳಲ್ಲಿ ಇಂದಿಗೂ ಹಸಿಹುಣಸಿ ಚಟ್ನಿಯನ್ನು ಮಾಡುತ್ತಾರೆ.