ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಬಾಲಕರು ಆಟ ಆಡುವಾಗ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಭಯಾನಕ ಘಟನೆ ನಗರದ ಮೂರು ಸಾವಿರ ಮಠದ ಹತ್ತಿರ ಸೋಮವಾರ ರಾತ್ರಿ ನಡೆದಿದೆ. ಕೇವಲ 13 ವರ್ಷದ ಬಾಲಕ ಚಾಕುವಿನಿಂದ ಇರಿದು 12 ವರ್ಷದ ಬಾಲಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಚೇತನ್(12) ಕೊಲೆಯಾದ ಬಾಲಕ. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗುರುಸಿದ್ದೇಶ್ವರ ನಗರದಲ್ಲಿ ಬಾಲಕರಿಬ್ಬರು ಆಟವಾಡುತ್ತಿದ್ದರು. ಇವರ ನಡುವೆ ಜಗಳವಾಗಿದೆ. 6ನೇ ಕ್ಲಾಸಿನ ಮಗು ಮನೆಗೆ ಹೋಗಿ ಚಾಕು ತಂದು 8ನೇ ಕ್ಲಾಸಿನ ಬಾಲಕನಿಗೆ ಇರಿದಿದ್ದಾನೆ. ಚಾಕು ಇರಿದ ಬಾಲಕನ ತಾಯಿಯೇ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಬಾಲಕ ಅದಾಗಲೇ ಮೃತಪಟ್ಟಿದ್ದ, ದುರಂತ ಎಂದರೆ ಅವರಿಗೆ ಒಬ್ಬನೆ ಮಗ. ಅವರ ತಂದೆ ರೊಟ್ಟಿ ವ್ಯಾಪಾರ ಮಾಡುವ ಬಡ ಕುಟುಂಬ. ಆರೋಪಿ ಕುಟುಂಬ ಸಹ ಬಡವರು. ನಾವು ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಸಣ್ಣಪುಟ್ಟ ಮಕ್ಕಳಲ್ಲಿಯೂ ಇಷ್ಟೊಂದು ಕ್ರೌರ್ಯ ಹೇಗೆ ಬೆಳೆಯುತ್ತಿದೆ ಅನ್ನೋದು ತಿಳಿಯದಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಹೇಳ ತೀರದಾಗಿದೆ.