ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಸಮಾಜಕ್ಕೆ ಅಂಟಿಕೊಂಡಂತಹ ರೋಗಗಳ ನಾಶಕ್ಕೆ ಅಂಬಿಗರ ಚೌಡಯ್ಯನವರ ವಚನಗಳು ಮದ್ದುಗಳಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಸೊಮ್ಮಲಿಂಗ ಗೆಣ್ಣೂರು ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ನೇರ, ನಿಷ್ಠುರವಾಗಿ ತಮ್ಮ ವಚನಗಳಲ್ಲಿ ಅಂಬಿಗರ ಚೌಡಯ್ಯನವರು ಹೇಳಿ ಸಮಾಜಕ್ಕೆ ಬೆಳಕಾಗಿದ್ದಾರೆ. ಮೂಡನಂಬಿಕೆಗಳು ಸಮಾಜಕ್ಕೆ ಆಘಾತಕಾರಿ ಅಂತಹ ಮೂಢನಂಬಿಕೆಗಳ ವಿರುದ್ಧ ನೇರವಾಗಿ ಮಾತನಾಡಿದ ಶಿವಶರಣ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದಿನ ಸಮಾಜದಲ್ಲಿನ ಮೌಢ್ಯಗಳ ನಿರ್ಮೂಲನೆಗಾಗಿ ಶ್ರಮಿಸಿದವರು. ಮಹಿಳೆಯರು ಮತ್ತು ಪುರುಷ ಸಮಾನರೆಂದು ಪ್ರತಿಪಾದಿಸಿದ ತತ್ವನಿಷ್ಟ ಶ್ರೇಷ್ಟ ತತ್ವಜ್ಞಾನಿ, ವಚನಕಾರರಾಗಿದ್ದರು ಎಂದು ಅವರು ತಿಳಿಸಿದರು.
ಕಾಯಕ ದಾಸೋಹ, ಶಿವಯೋಗ ಸಾಧನೆಯ ಮೂಲಕ ವಚನಗಳನ್ನು ಕಟ್ಟಿ ಕೊಟ್ಟಿದ್ದಾರೆ. ಅವರ 279 ವಚನಗಳು ದೊರಕಿದ್ದು, ಅವರ ವಚನಗಳಲ್ಲಿ ವೈಚಾರಿಕತೆ, ಇಷ್ಟಲಿಂಗ, ನಿಷ್ಟೆ, ಕಾಲಜ್ಞಾನ, ಸಂಕೀರ್ಣ ವಚನಗಳು, ಜೀವನ್ಮುಕ್ತಿ ಸ್ಥಿತಿ, ಆಧ್ಯಾತ್ಮಕತೆ ವಿಡಂಬನೆ, ಸೃಷ್ಟಿಯ ಕ್ರಮ ಸೇರಿದಂತೆ ಹಲ ವಿಶೇಷತೆಗಳನ್ನು ಅವರ ವಚನಗಳಲ್ಲಿ ಕಾಣಬಹುದಾಗಿದೆ. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಕುರಿತು ಉಪನ್ಯಾಸ ನೀಡಿದ ಸಾಹಿತಿಗಳಾದ ಸತ್ಯಣ್ಣ ಹಡಪದ, ಅಂಬಿಗರ ಚೌಡಯ್ಯ ಒಬ್ಬ ನಿಷ್ಠುರವಾದಿ, ನಿರ್ಭಯವಾದಿ ವಚಣಕಾರರಾಗಿದ್ದರು. 12ನೇ ಶತಮಾನದಲ್ಲಿಯೇ ಸಮಾನತೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಒಬ್ಬ ಶ್ರೇಷ್ಠ ಶರಣರಾಗಿದ್ದರು. ಸಾಮಾಜಿಕ ನ್ಯಾಯ, ಕಂದಾಚಾರಗಳ ಕುರಿತು ತಮ್ಮ ವಚನಗಳಲ್ಲಿ ಚಿತ್ರಿಸಿದ್ದಾರೆ ಎಂದು ಹೇಳಿದರು. ಬಡವರ ದಿನ ದಲಿತರ ಪರವಾಗಿ ಬಸವಣ್ಣವರ ಮುಖಂಡತ್ವದಲ್ಲಿ ಹೋರಾಡಿದರು ಎಂದು ಹೇಳಿದರು.
ನಿಜ ಶರಣ ಅಂಬಿಗರ ಚೌಡಯ್ಯನವರ ಸಂಘದ ಜಿಲ್ಲಾಧ್ಯಕ್ಷರಾದ ಸಾಹೇಬ್‌ಗೌಡ ಬಿರಾದಾರ ಮಾತನಾಡಿ, ಶರಣಗಳಲ್ಲಿಯೇ ನಿಜಶರಣ ಎಂಬ ಬಿರುದು ಚೌಡಯ್ಯನವರಿಗಿತ್ತು. ಕಬ್ಬಿಣದ ಕಡಲೆಗಳಂತಹ ವಚನಗಳನ್ನು ಸರಳವಾಗಿ ಬಿಡಿಸುತ್ತಿದರು ಎಂದು ಅಂಬಿಗರ ಚೌಡಯ್ಯನವರ ಕುರಿತು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಬೋವಿ ಸ್ವಾಗತಿಸಿದರು. ಸುಭಾಸ ಕನ್ನೂರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಾಧಿಕಾರಿ ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಪಂಚಾಯತ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ, ಸಮಾಜ ಮುಖಂಡರಾದ ಭರತ ಕೋಳಿ, ಶಿವಾನಂದ ಅಂಬಿಗರ, ಗುರುನಾಥ ವಾಲಿಕಾರ, ಮಹಾದೇವ ಗದ್ಯಾಳ, ಅಶೋಕ ಅಂಬಿಗರ, ಅಪ್ಪು ಕೊಲಕಾರ, ಪ್ರವೀಣ ಗಣಿ, ದಾನಮ್ಮ ಕೋಳಿ, ರೇಣುಕಾ ಮಣ್ಣಿಕೆರಿ, ಪೂಜಾ ಕೋಳಿ, ಹನಮಂತ ನಾಯ್ಕೊಡಿ, ರೂಪಾ, ಕವಿತಾ ತಳವಾರ, ಅನ್ನಪೂರ್ಣಾ ಕೋಳಿ, ಸಂತೋಷ ತಟಗಾರ, ಹಣುಮಂತ ಜಕಣ್ಣವರ, ಪರಶುರಾಮ ಅಳಗುಂಡಿ, ಸೋಮಣಗೌಡ ಕಲ್ಲೂರು, ಭೀಮರಾಯ ಜಿಗಜಿಣಗಿ, ದೇವೆಂದ್ರ ಮಿರೇಕರ, ಲಕ್ಷ್ಮಣ ಜಾವಡಗಿ, ಸಿ.ಎಸ್.ಕಮತಗಿ, ಪಿ.ಕೆ.ಚೌದರಿ, ಜಿಲ್ಲಾಧಿಕಾರಿಗಳ ಕಛೇರಿ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.