ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೊಲೆ(Murder case) ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅವರ ಮನವಿಯನ್ನು ಪುರಸ್ಕರಿಸಿದೆ. ಚಾರ್ಜ್ ಶೀಟ್ ನಲ್ಲಿರುವ ಗೌಪ್ಯ ವಿಚಾರಗಳನ್ನು ಪ್ರಸಾರ ಮಾಡದಂತೆ ದೃಶ್ಯ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ(Media) ನಿರ್ಬಂಧವಿಸಿದೆ. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ದೋಷಾರೋಪ ಪಟ್ಟಿಯಲ್ಲಿನ ವಿಚಾರಗಳ ಕುರಿತು ವರದಿ ಪ್ರಸಾರ ಮಾಡದಂತೆ ನಿರ್ಬಂಧವಿಸಿದೆ. ಒಂದು ವೇಳೆ ಪ್ರಸಾರ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಲಾಗಿದೆ.
ನಟ ದರ್ಶನ್(Darshan) ಪರ ಹಿರಿಯ ವಕೀಲ ಪ್ರಭುಲಿಂಗ ಕೆ ನಾವದಗಿ ಹಾಜರಿದ್ದರು. ಮಾಧ್ಯಮಗಳಲ್ಲಿ ಪೂರ್ವಗ್ರಹ ಪೀಡಿತವಾಗಿ ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದು ಕೇಬಲ್ ಟೆಲಿವಿಷನ್ ನೆಟ್ ವರ್ಕ್ಸ್ ನಿಯಂತ್ರಣ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ವಾದ ಮಂಡಿಸಿದರು. ಇದಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ್ ಕಾಮತ್ ವಿರೋಧ ವ್ಯಕ್ತಪಡಿಸಿದರು. ನಿರ್ದಿಷ್ಟ ಮಾಧ್ಯಮ ಅಥವ ಚಾನಲ್ ವಿರುದ್ಧ ದೂರು ಕೊಟ್ಟರೆ ಸಚಿವಾಲಯ ಕ್ರಮ ತೆಗೆದುಕೊಳ್ಳುತ್ತೆ ಎಂದರು.
ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲವೇ ಎಂದು ಪೀಠ ಕಾಮತ್ ಅವರನ್ನು ಪ್ರಶ್ನಿಸಿತು. ದೇಶದಲ್ಲಿ ಕನಿಷ್ಠ 2 ಸಾವಿರ ಮಾಧ್ಯಮಗಳಿದ್ದು, ಇವರಲ್ಲಿ ಯಾರನ್ನು ನಿಯಂತ್ರಿಸಬೇಕು. ಅರ್ಜಿದಾರರು ನಿರ್ದಿಷ್ಟ ಮಾಧ್ಯಮಗಳನ್ನು ಸೂಚಿಸಿ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳಬಹುದು ಎಂದರು. ಆದರೆ, ಕೋರ್ಟ್ ಚಾರ್ಜ್ ಶೀಟ್ ನಲ್ಲಿರುವ ಗೌಪ್ಯ ಮಾಹಿತಿ ಪ್ರಚಾರಕ್ಕೆ ನಿರ್ಬಂಧ(Restriction)ಹೇರಿದ್ದು, ಕಾನೂನು ಉಲ್ಲಂಘಿಸುವ ಮಾಧ್ಯಮಗಳ ವಿರುದ್ಧ ಕ್ರಮಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಸೂಚನೆ ನೀಡಿತು.