ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ ಅವರನ್ನು ಇಲ್ಲಿನ 5ನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಪೊಲೀಸರು ಶುಕ್ರವಾರ ಹಾಜರು ಪಡಿಸಿದರು. ಈ ವೇಳೆ ನ್ಯಾಯಾಧೀಶರ ಮುಂದೆ ತಮ್ಮನ್ನು ಯಾಕೆ ಬಂಧಿಸಿದ್ದಾರೆ ಎನ್ನುವುದೇ ಗೊತ್ತಿಲ್ಲ ಎಂದರು. ನನ್ನ ಮೇಲೆ ಮೂರು ಬಾರಿ ಹಲ್ಲೆ ಮಾಡಲಾಗಿದೆ. ಪೊಲೀಸರಿಗೆ 10 ನಿಮಿಷಕ್ಕೆ ಫೋನ್ ಬರುತ್ತಿತ್ತು. ಅಲ್ಲಿಂದ ಬಂದ ನಿರ್ದೇಶನದಂತೆ ಅವರು ವರ್ತಿಸುತ್ತಿದ್ದರು ಎಂದಿದ್ದಾರೆ
ನಾನು ದೂರು ಕೊಟ್ಟರೂ ಪೊಲೀಸರು ಸ್ವೀಕರಿಸಿಲ್ಲ ಎಂದು ಹೇಳಿದರು. ಸಿ.ಟಿ ರವಿ ಪರ ವಕೀಲರಾದ ಎಂ.ಬಿ ಜಿರಲಿ ಪೊಲೀಸರ ವರ್ತನೆ ಕುರಿತು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರು. ಇನ್ನು ವಿಚಾರಣೆ ನಡೆಯುತ್ತಿದೆ. ಗುರುವಾರ ಸುವರ್ಣಸೌಧದ ಪರಿಷತ್ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ನೀಡಿದ ಹೇಳಿಕೆ ಸಂಬಂಧ ನಡೆದ ಕಾಂಗ್ರೆಸ್-ಬಿಜೆಪಿ ಸದಸ್ಯರ ಜಟಾಪಟಿ ನಡುವೆ ಸಿ.ಟಿ ರವಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರಗೆ ಪ್ರಾಸಿಟ್ಯೂಟ್ ಎನ್ನುವ ಪದ ಬಳಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಿರೇಬಾಗೇವಾಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.