ಪ್ರಜಾಸ್ತ್ರ ಸುದ್ದಿ
ಚಂಡೀಗಢ(Chandigarh): ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗಿ, ಪ್ರೀತಿಸಿ ಮೋಸ ಹೋಗುತ್ತಿರುವ ಜನರ ಸಂಖ್ಯೆ ಏನೂ ಕಡಿಮೆಯಿಲ್ಲ. ಹುಡುಗನ ನಂಬಿ ಬರುವ ಹುಡುಗಿಯರು, ಹುಡುಗಿಯರ ನಂಬಿ ಬರುವ ಹುಡುಗರು, ಮದುವೆಯಾಗಿ, ಮಕ್ಕಳಿದ್ದರೂ ಹೆಂಡ್ತಿ, ಗಂಡನನ್ನು ಬಿಟ್ಟು ಹೋಗುತ್ತಿರುವವರ ಸಂಖ್ಯೆನೂ ಹೆಚ್ಚಾಗುತ್ತಿದೆ. ಕೊನೆಗೆ ಮೋಸ ಹೋಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವವರು ಒಂದು ಕಡೆಯಾದರೆ, ಜೀವ ಕಳೆದುಕೊಳ್ಳುತ್ತಿರುವವರು ಮತ್ತೊಂದು ಕಡೆಯಿದ್ದಾರೆ.
ದುಬೈನಲ್ಲಿ ಕಾರ್ಮಿಕ ಕೆಲಸ ಮಾಡಿಕೊಂಡಿದ್ದ ಹುಡುಗನೊಬ್ಬನಿಗೆ ಇನ್ ಸ್ಟಾಗ್ರಾಮ್(Instagram) ಮೂಲಕ ಹುಡುಗಿಯೊಬ್ಬಳು ಪರಿಚಯವಾಗಿದ್ದಾಳೆ. ಪಂಜಾಬ್ ನ ಮೋಗಾ ಜಿಲ್ಲೆಯ ಯುವತಿಯೊಂದಿಗೆ ಆದ ಪರಿಚಯ(Love) ಪ್ರೀತಿಯಾಗಿದೆ. ಹೀಗಿದ್ದರೂ ಒಬ್ಬರಿಗೊಬ್ಬರು ಮುಖವನ್ನು ಸಹ ನೋಡಿಲ್ಲವಂತೆ. ಹುಡುಗಿಯ ಕಡೆಯುವರು ಫೋನ್ ಮೂಲಕ ಮದುವೆಯ ನಿಶ್ಚಿಯ ಮಾಡಿದ್ದಾರೆ. ಇದನ್ನು ನಂಬಿ ದುಬೈನಿಂದ ಹುಟ್ಟೂರಾದ ಚಂಡೀಗಢದ ಜಲಂದರ್ ಜಿಲ್ಲೆಯ ಮಂಡಯಾಲಿ ಗ್ರಾಮಕ್ಕೆ ಕಳೆದ ಒಂದು ತಿಂಗಳ ಹಿಂದೆ ದೀಪಕ್ ಎನ್ನುವ ಹುಡುಗ ಬಂದಿದ್ದಾನೆ.
ಇತ್ತೀಚೆಗೆ ಅವರ ಮದುವೆ(Marriage) ನಿಶ್ಚಿಯವಾದ ಸ್ಥಳಕ್ಕೆ ಕುಟುಂಬಸ್ಥರೊಂದಿಗೆ, 150ಕ್ಕೂ ಹೆಚ್ಚು ಬಂಧುಗಳೊಂದಿಗೆ ಪಂಜಾಬಿನ ಮೋಗಾ ಜಿಲ್ಲೆಗೆ ದೀಪಕ್ ಬಂದಿದ್ದಾನೆ. ವಧು ಮನ್ ಪ್ರೀತ್ ಕೌರ್ ಹೇಳಿದಂತೆ ಆಕೆ ಕಡೆಯುವರು ಬಂದು ರೋಸ್ ಗಾರ್ಡನ್ ಪ್ಯಾಲೇಸ್ ಗೆ ಕರೆದುಕೊಂಡು ಬರುತ್ತಾರೆ ಎಂದು ಇವರು ಕಾಯುತ್ತಲೇ ಇದ್ದಾರೆ. ಸಂಜೆ 5 ಗಂಟೆಯಾದರೂ ಯಾರ ಸುಳಿವೂ ಇಲ್ಲ. ಕಲ್ಯಾಣ ಮಂಟಪ ಬಗ್ಗೆ ವಿಚಾರಿಸಿದರೆ ಆ ಹೆಸರಿನ ಯಾವ ಕಲ್ಯಾಣ ಮಂಟಪ ಇಲ್ಲವೆಂದು ಸ್ಥಳೀಯರು ಹೇಳಿದ್ದಾರೆ. ಇದರಿಂದ ಕಂಗಾಲಾದ ವರ ದೀಪಕ್ ವಧುವಿಗೆ ಸಂಪರ್ಕಿಸಲು ನೋಡಿದರೆ ಯಾರೊಬ್ಬರೂ ಸಿಕ್ಕಿಲ್ಲ. ಕೊನೆಗೆ ಮನ್ ಪ್ರೀತ್ ಕೌರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಒಬ್ಬರಿಗೊಬ್ಬರು ಮುಖ ನೋಡಿದೆ, ಎರಡು ಕುಟುಂಬಸ್ಥರೊಂದಿಗೆ ಕುಳಿತು ಮಾತನಾಡದೆ ನೇರವಾಗಿ ಕಲ್ಯಾಣ ಮಂಟಪಕ್ಕೆ ಬರುವಷ್ಟು ದಡ್ಡರಾಗಬಾರದು.