ಪ್ರಜಾಸ್ತ್ರ ಸುದ್ದಿ
ಚಂಡೀಗಢ(Chandigarh): ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹಿಳಾ ಕುಸ್ತಿಪಟು ವಿನೇಶ್ ಪೋಗೆಟ್(Vinesh Phogat) ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಮೊದಲ ಸ್ಪರ್ಧೆಯಲ್ಲಿ ದಾಖಲೆ ಬರೆದಿದ್ದಾರೆ. ಜುಲಾನಾ ವಿಧಾನಸಭಾ ಕ್ಷೇತ್ರದಿಂದ ವಿನೀಶ್ ಪೋಗೆಟ್ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಯೋಗೀಶ್ ಕುಮರ್ ವಿರುದ್ಧ 6,015 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಇಬ್ಬರ ನಡುವೆ ಕೊನೆಯ ಹಂತದ ತನಕ ನೇರಾನೇರ ಫೈಟ್ ನಡೆದಿತ್ತು.
ಇತ್ತೀಚೆಗೆ ಪ್ಯಾರಿಸ್ ನಲ್ಲಿ ಮುಕ್ತಾಯಗೊಂಡ ಒಲಿಂಪಿಕ್ಸ್ ನಲ್ಲಿ 50 ಕೆಜಿ ವಿಭಾಗದಲ್ಲಿ ಫೈನಲ್ ಹಂತಕ್ಕೆ ಬಂದಿದ್ದ ವಿನೇಶ್ ಪೋಗೆಟ್ ಕೇವಲ 100 ಗ್ರಾಂ ತೂಕ ಹೆಚ್ಚಾಗಿದೆ ಎಂದು ಅನರ್ಹಗೊಳಿಸಲಾಯಿತು. ಇದು ವಿಶ್ವದ ತುಂಬ ದೊಡ್ಡ ಚರ್ಚೆಯಾಯಿತು. ಭಾರತೀಯರೆಲ್ಲ ವಿನೇಶ್ ಪೋಗೆಟ್ ಪರ ನಿಂತುಕೊಂಡರು. ಈ ಘಟನೆ ಬಳಿಕ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಕುಸ್ತಿಪಟು, ಸ್ನೇಹಿತ ಭಜರಂಗ್ ಪೂನಿಯಾ ಹಾಗೂ ಪೋಗೆಟ್ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾದರು. ಎಲ್ಲರೂ ಊಹಿಸಿದಂತೆ ಹರಿಯಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. 30 ವರ್ಷದ ಪೋಗೆಟ್ ಶಾಸಕಿಯಾಗುವ ಮೂಲಕ ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ.