ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ(MUDA) ನಡೆದ ಅವ್ಯವಹಾರದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರವಿದೆ ಎಂದು ಆರೋಪಿಸಿರುವ ಬಿಜೆಪಿ ಶನಿವಾರದಿಂದ ಮೈಸೂರು(Mysore) ಚಲೋ ಪಾದಯಾತ್ರೆ ನಡೆಸುತ್ತಿದೆ. ಈ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್(R.Ashoka) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಮೈಸೂರು ಚಲೋ ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ. ಇದು ಭ್ರಷ್ಟಾಚಾರ ವಿರುದ್ಧದ ದಂಡಯಾತ್ರೆ ಎಂದಿದ್ದಾರೆ.
ಆರೂವರೆ ಕೋಟಿ ಕನ್ನಡಿಗರ ಜನಾಕ್ರೋಶಕ್ಕೆ ದನಿಗೂಡಿಸುವ ಪ್ರಜಾಯಾತ್ರೆ. ಅನೈತಿಕತೆಯ ವಿರುದ್ಧ ನೈತಿಕತೆಯ ಮೌನಯಾತ್ರೆ. ಅಧರ್ಮ ರಾಜಕಾರಣದ ವಿರುದ್ಧ ಧರ್ಮ ರಾಜಕಾರಣದ ಸಂಘರ್ಷ ಯಾತ್ರೆ. ಅಸತ್ಯದ ವಿರುದ್ಧ ಸತ್ಯದ ನ್ಯಾಯ ಯಾತ್ರೆ. ಸಿಎಂ ಸಿದ್ದರಾಮಯ್ಯನವರ ಅಕ್ರಮಗಳ ವಿರುದ್ಧ ಎನ್ ಡಿಎ ಮಿತ್ರಕೂಟ ನಡೆಸಿರುವ ಜನಾಂದೋಲನಕ್ಕೆ ನಾಳೆ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯನವರೇ ಈಗಲೂ ಕಾಲ ಮಿಂಚಿಲ್ಲ. ತಮಗೆ ಕಿಂಚಿತ್ತಾದರೂ ನೈತಿಕತೆ, ಆತ್ಮಸಾಕ್ಷಿ, ಅಂತಃಕರಣ ಅನ್ನುವುದು ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ. ಈಗ ಪ್ರಾಯಶ್ಚಿತ ಮಾಡಿಕೊಳ್ಳದಿದ್ದರೆ ಮುಂದೆ ಪಶ್ಚಾತ್ತಾಪಕ್ಕೂ ಅವಕಾಶ ಇರುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.