ಪ್ರಜಾಸ್ತ್ರ ಸುದ್ದಿ
ಇವತ್ತಿನ ಆಧುನಿಕ ಬದುಕಿನಲ್ಲಿ ಏನಾದರೂ ಹೊಸದು ಬಂತು ಅಂದರೆ ಯೋಚನೆ ಮಾಡದೆ ಅದಕ್ಕೆ ಮಾರು ಹೋಗುವವರೆ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಡಿಜಿಟಲ್ ಪ್ರಪಂಚ ಇನ್ನು ಅತೀ ವೇಗವಾಗಿದೆ. ಹೀಗಾಗಿ ಹೊಸ ಹೊಸ ಅಪ್ಲಿಕೇಷನ್ ಗಳು ಬಹುಬೇಗ ಪ್ರಸಿದ್ದಿಗೆ ಬಂದು ಹಳ್ಳಿಯ ತನಕ ತಲುಪಿ ಬಿಡುತ್ತವೆ. ಅದಕ್ಕೆ ಇದೀಗ ಘಿಬ್ಲಿ ಅನ್ನೋ ಎಐ ಅನಿಮೇಟೆಡ್ ಚಿತ್ರದ ಹಾವಳಿ ಜೋರಾಗಿದೆ. ಎಲ್ಲರೂ ಅನಿಮೇಷನ್ ಸ್ಟುಡಿಯೋ ಮೂಲಕ ತಮ್ಮ ಫೋಟೋಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ.
ಜಪಾನಿನ ಅನಿಮೇಷನ್ ಸ್ಟುಡಿಯೋ ಘಿಬ್ಲಿ ರೀತಿಯಲ್ಲಿ ಮೂರ್ನಾಲ್ಕು ಆಪ್ ಗಳು ಈಗ ಸಿದ್ಧವಾಗಿದೆ. ಕ್ಷಣ ಮಾತ್ರದಲ್ಲಿ ಫೋಟೋಗಳನ್ನು ಅನಿಮೇಷನ್ ಮಾದರಿಯಲ್ಲಿ ಬದಲಾಯಿಸುತ್ತವೆ. ಪ್ರತಿಯೊಬ್ಬರು ಇದರ ಹಿಂದೆ ಬಿದ್ದಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡು ಖುಷಿ ಪಡುತ್ತಿದ್ದಾರೆ. ಆದರೆ, ಇದು ಎಷ್ಟು ಸುರಕ್ಷಿತ ಅನ್ನೋ ಪ್ರಶ್ನೆ ಎದ್ದಿದೆ. ಡಿಜಿಟಲ್ ತಜ್ಞರು ಮಾಹಿತಿ ಸೋರಿಕೆ ಆತಂಕ ವ್ಯಕ್ತಪಡಿಸಿದ್ದಾರೆ.
ಘಿಬ್ಲಿ ಚಿತ್ರಗಳು ನೈಜ ಫೋಟೋಗಿಂತ ಸಿಕ್ಕಾಪಟ್ಟೆ ಭಿನ್ನವಾಗಿವೆ. ಕೆಲವೊಂದು ವಸ್ತುಗಳು ಮಾಯವಾಗುತ್ತವೆ. ಇಲ್ಲದ ವಸ್ತುಗಳು ಫೋಟೋದಲ್ಲಿ ಬರುತ್ತವೆ. ಆನ್ಲೈನ್ ವಂಚನೆ ಇವತ್ತು ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡುತ್ತಿದೆ. ಹೀಗಾಗಿ ಹೊಸ ಹೊಸ ಆಪ್ ಗಳು ಮೂಲಕ ಜನರ ವೈಯಕ್ತಿಕ ಮಾಹಿತಿಯ ಸೋರಿಕೆಯಾಗಿ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಿದ್ದಾರೆ. ಹೊಸ ಹೊಸ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಖುಷಿ ಪಡುವ ಅವಸರದಲ್ಲಿ ಮೋಸ ಹೋಗದಿರಿ ಎಂದು ಹೇಳಲಾಗುತ್ತಿದೆ.