ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಿಯಂತ್ರಣದಲ್ಲಿದ್ದಾರೆ ಎನ್ನುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(lakshmi hebbalkar) ತಿರುಗೇಟು ನೀಡಿದ್ದು, ಹಿಂದಿನಿಂದಲೂ ಬಹಳಷ್ಟು ಜನರು ಶಕುನಿ ರಾಜಕಾರಣ ಮಾಡಿದ್ದಾರೆ. ಇದಕ್ಕೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಮೂಲಕ ರಮೇಶ ಜಾರಕಿಹೊಳಿಗೆ ಶಕುನಿ(Shakuni) ಎಂದಿದ್ದಾರೆ.
ಸಿದ್ದರಾಮಯ್ಯ(Siddaramaiah), ಡಿ.ಕೆ ಶಿವಕುಮಾರ್(DK Shivakumar) ಮತ್ಸದ್ದಿ ರಾಜಕಾರಣಿಗಳು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರು 7 ಬಾರಿ ಶಾಸಕರಾಗಿದ್ದಾರೆ. ಈ ಇಬ್ಬರು ನಾಯಕರ ನಡುವೆ ವಿಷಬೀಜ ಬಿತ್ತಬೇಕು ಎನ್ನುವ ದುರುದ್ದೇಶ ಇಟ್ಟುಕೊಂಡಿದ್ದಾರೆ ಎಂದರು. ಯತ್ನಾಳ ಹೊಂದಾಣಿಕೆ ರಾಜಕಾರಣದ ಹೇಳಿಕೆ ವಿರುದ್ಧವೂ ಕಿಡಿ ಕಾರಿದರು. ಗೊಂದಲ ಸೃಷ್ಟಿಸಲು ಹೀಗೆ ಮಾತನಾಡುತ್ತಾರೆ. ನಾವು ಏಳು ತಿಂಗಳಿಗೆ ಹುಟ್ಟಿಲ್ಲ. ಇಲ್ಲಿ ಯಾರೂ ಕಿವಿಯಲ್ಲಿ ಹೂವು ಇಟ್ಟುಕೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.