ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಜೆಪಿ ಮಾಜಿ ಎಂಎಲ್ಸಿ, ಉದ್ಯಮಿ ದಯಾನಂದ ರೆಡ್ಡಿ ಅವರನ್ನು ಅಪಹರಣ ಮಾಡಿ 3 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಘಟನೆ ತಡರಾತ್ರಿ ಆನೇಕಲ್ ಹತ್ತಿರ ನಡೆದಿದೆ. ರಾತ್ರಿ 12.15ರ ಸುಮಾರಿಗೆ ಗೋಲ್ಡ್ ಕಾಯಿನ್ ಕ್ಲಬ್ ನಿಂದ ದಯಾನಂದ ರೆಡ್ಡಿ ಹೊರಟಿದ್ದರು. ಹಿಲಲಿಗೆ ಗ್ರಾಮದ ಹತ್ತಿರ ಬೈಕ್ ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿದ್ದಾರೆ. ನಿಮಗೆ ಗಿಫ್ಟ್ ಬಂದಿದೆ ಎಂದು ತೋರಿಸಿದ್ದಾರೆ.
ದಯಾನಂದ್ ರೆಡ್ಡಿ ಕಾರಿನ ಬಾಗಿಲು ತೆರೆಯುತ್ತಿದ್ದಂತೆ ಗನ್ ತೋರಿಸಿ ನಾವು ಹೇಳಿದ ಕಡೆ ಕಾರು ತೆಗೆದುಕೊಂಡು ಹೋಗು ಎಂದಿದ್ದಾರೆ. ಮತ್ತೊಂದು ಕೆಂಪು ಬಣ್ಣದ ಕಾರಿನಲ್ಲಿ ಇಬ್ಬರು ಬೆನ್ನುಹತ್ತಿದ್ದಾರೆ. ಅತಿಬೆಲೆ ಕೆಎಚ್ ಬಿ ಕಾಲೋನಿ ಹತ್ತಿರ ಕರೆದುಕೊಂಡು ಹೋಗಿ ಬೆದರಿಕೆ ಹಾಕಿದ್ದಾರೆ. ನಿನ್ನ ಕೊಲೆ ಮಾಡಲು 10 ಕೋಟಿ ರೂಪಾಯಿ ಸುಪಾರಿ ಕೊಟ್ಟಿದ್ದಾರೆ ಎಂದಿದ್ದಾರೆ. ಆ ಹಣ ನಾನೆ ಕೊಡುತ್ತೇನೆ ಕೊಲ್ಲಬೇಡಿ ಎಂದಿದ್ದಾರೆ.
ಆಗ 3 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 2 ಕೋಟಿ ರೂಪಾಯಿಗೆ ಒಪ್ಪಿಕೊಂಡಿದ್ದಾರೆ. ಈಗ ಅಷ್ಟೊಂದು ಹಣ ಇಲ್ಲ. ಮುಂಜಾನೆ ಬ್ಯಾಂಕ್ ಶುರುವಾಗುತ್ತಿದ್ದಂತೆ ಹಣ ಡ್ರಾ ಮಾಡಿಕೊಡುತ್ತೇನೆ ಎಂದಿದ್ದಾರೆ. ಇದಕ್ಕೆ ಒಪ್ಪಿದ ಅಪಹರಣಕಾರರು ಒಂದು ನಂಬರ್ ಕೊಟ್ಟು ಫೋನ್ ಮಾಡಲು ಹೇಳಿ ಬಿಟ್ಟು ಕಳಿಸಿದ್ದಾರೆ. ಜೀವ ಉಳಿಸಿಕೊಂಡು ಬಂದ ದಯಾನಂದ ರೆಡ್ಡಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



