ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕಾರಜೋಳದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಭೇಟಿ ನೀಡಿ, ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಹಾಗೂ ವಸತಿ ವ್ಯವಸ್ಥೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಮಕ್ಕಳೊಂದಿಗೆ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲಿಸಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ನಿತ್ಯ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಉತ್ತಮ ಸೌಲಭ್ಯ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜೊತೆಗೆ ವಸತಿ ಶಾಲೆಯಲ್ಲಿರುವ ತಂಗಿರುವ ವಿದ್ಯಾರ್ಥಿಗಳಿಗೆ ಮೆನ್ಯೂವಿನಂತೆ ಉಪಹಾರ ಹಾಗೂ ಊಟದ ವ್ಯವಸ್ಥೆಗೆ ನಿಗಾ ವಹಿಸಬೇಕು ಎಂದ ಅವರು, ಊಟ ಹಾಗೂ ಉಪಹಾರದ ವ್ಯವಸ್ಥೆಯಲ್ಲಿ ನಿಲಯದ ನಿಲಯ ಪಾಲಕರು, ಪ್ರಾಚಾರ್ಯರು ಹಾಗೂ ಶಿಕ್ಷಕರು ವಿಶೇಷ ಮುತುವರ್ಜಿ ವಹಿಸಬೇಕು. ಶುಚಿತ್ವ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಬೇಕು.ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸುವ ನಿಟ್ಟಿನಲ್ಲಿ ವಿವಿಧ ಬೋಧನಾ ಉಪಕ್ರಮಗಳನ್ನು ಅನ್ವಯಿಸಬೇಕು. ಇಲ್ಲಿ ಇರುವ ಮಕ್ಕಳ ಆರೋಗ್ಯ ಅವರು ಎದುರಿಸುತ್ತಿರುವ ಚಿಕ್ಕ ಚಿಕ್ಕ ವಿಷಯಗಳನ್ನು ಕೇಳಿ ತಿಳಿದುಕೊಂಡು ಪರಿಹರಿಸಿ,ಮಕ್ಕಳ ಸ್ನೇಹಿಯಾಗಿ, ಅವರು ಇಲ್ಲಿ ವಿದ್ಯಾರ್ಜನೆ ಮಾಡಲು ಪ್ರೋತ್ಸಾಹ ನೀಡಬೇಕು ಮಕ್ಕಳ ಆಸಕ್ತಿ ಕ್ಷೇತ್ರ ಗುರುತಿಸಿ ಅವರಿಗೆ ಮೋಟಿವೇಟ್ ಮಾಡಬೇಕು.ಇದು ಶಿಕ್ಷಕ ರೂಢಿಸಿಕೊಳ್ಳಬೇಕಾದ ಕೌಶಲ್ಯವೂ ಆಗಿದೆ ಎಂದು ಪ್ರಾಚಾರ್ಯರು ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಬಳಿಕ ಮಕ್ಕಳ ಸ್ನಾನ ಕೋಣೆ ಹಾಗೂ ಶೌಚಾಲಯ ಸೌಲಭ್ಯಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಲಭ್ಯವಿರುವ ಸಕಲ ಸೌಲಭ್ಯಗಳನ್ನು ಪಡೆದುಕೊಂಡು, ಚೆನ್ನಾಗಿ ಅಭ್ಯಾಸ ಮಾಡಿ, ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಕಲಿತ ಶಾಲೆ, ಶಿಕ್ಷಕರಿಗೆ ಹಾಗೂ ನಿಮ್ಮ ತಂದೆ-ತಾಯಿಗಳ ಕೀರ್ತಿ ಹೆಚ್ಚಿಸಬೇಕು ಎಂದು ಕಿವಿಮಾತು ಹೇಳಿದರು. ಬಳಿಕ ಅಡುಗೆಯವರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಕ್ಕಳಿಗೆ ಆಹಾರ ಸಿದ್ಧಪಡಿಸುವ ಮುನ್ನ ಅಡುಗೆ ಸಿಬ್ಬಂದಿ ಶುಚಿತ್ವಕ್ಕೆ ಮೊದಲಾದ್ಯತೆ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರು, ನಿಲಯ ಪಾಲಕರು, ಶಿಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.



