ಪ್ರಜಾಸ್ತ್ರ ಸುದ್ದಿ
ಇವತ್ತಿನ ರಿಯಾಲಿಟಿ ಶೋ ಜಮಾನಾದಲ್ಲಿ ರಾತ್ರೋರಾತ್ರಿ ಯಾರ್ಯಾರೊ ಜನಪ್ರಿಯತೆ ಪಡೆದು ಬಿಡುತ್ತಾರೆ. ಸ್ಕ್ರೀನ್ ಮೇಲೆ ಕಾಣುವುದೆ ಬೇರೆ, ಅದರ ಹಿಂದೆ ಇರುವುದು ಬೇರೆ ಅನ್ನೋದು ಹಲವರ ಆರೋಪ. ಇದೀಗ ತೆಲುಗಿನ ಜನಪ್ರಿಯ ರಿಯಾಲಿಟಿ ಶೋ ವಿರುದ್ಧ ಸ್ಪರ್ಧಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಖ್ಯಾತ ಸಂಗೀತ ಸಂಯೋಜಕ ಎಂ.ಎಂ ಕಿರವಾಣಿ, ಗೀತರಚನೆಕಾರ ಚಂದ್ರಬೋಸ್, ಗಾಯಕಿ ಸುನಿಥಾ ತೀರ್ಪುಗಾರರಾಗಿರುವ ಶೋದಲ್ಲಿ ಅಸಭ್ಯವಾಗಿ ವರ್ತಿಸಲಾಗುತ್ತಿದೆ. ಅವಮಾನ ಮಾಡಲಾಗುತ್ತಿದೆ ಎಂದು ಗಾಯಕಿ ಪ್ರವಸ್ತಿ ಆರಾಧ್ಯ ಆರೋಪಿಸಿದ್ದಾರೆ.
ಪಾಡುತಾ ತೀಯಗಾ ಶೋ ಸ್ಪರ್ಧಿಯಾಗಿರುವ ಪ್ರವಸ್ತಿ ಆರಾಧ್ಯ, ಇಲ್ಲಿ ಪಕ್ಷಪಾತ ಮಾಡಲಾಗುತ್ತಿದೆ. ಅವಮಾನ, ಅನ್ಯಾಯ ನಡೆಸಲಾಗುತ್ತಿದೆ. ಜೀವನಕ್ಕಾಗಿ ಮದುವೆ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಹಾಡುತ್ತೇನೆ. ಆದರೆ, ತೀರ್ಪುಗಾರರು ನನ್ನ ವೃತ್ತಿಯನ್ನು ಅಪಹಾಸ್ಯ ಮಾಡಿದ್ದಾರೆ. ಕೀಳಾಗಿ ಕಾಣುತ್ತಾರೆ. ಬಾಡಿ ಶೇಮಿಂಗ್ ಮಾಡುತ್ತಾರೆ. ಹೊಕ್ಕಳ ಕಾಣಿಸುವಂತೆ ಸೀರೆ ಉಡಬೇಕು ಎಂದು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ. ಈ ಪ್ರೊಡಕ್ಷನ್ ನವರು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದಿದ್ದಾಳೆ.