ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸ್ವಪಕ್ಷೀಯ ಶಾಸಕ ರಮೇಶ ಜಾರಕಿಹೊಳಿ(Ramesh Jarakiholi) ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಅವನೊಬ್ಬ ಭ್ರಷ್ಟ. ಅವನಿಗೆ ಯಾವುದೇ ಐಡಿಯಾಲಜಿ ಇಲ್ಲ. ಪಕ್ಷದಲ್ಲಿ ಅವನಿನ್ನೂ ಜೂನಿಯರ್. ರಾಜ್ಯಾಧ್ಯಕ್ಷ ಎಂದು ನಾನು ಒಪ್ಪುವುದಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಿಎಸ್ವೈ, ವಿಜಯೇಂದ್ರ ವಿರುದ್ಧ ಕಿಡಿ ಕಾರುವ ಸ್ವಪಕ್ಷೀಯ ಶಾಸಕ ಯತ್ನಾಳ ಸಾಲಿಗೆ ರಮೇಶ ಜಾರಕಿಹೊಳಿಯೂ ಸೇರ್ಪಡೆಯಾಗಿದ್ದಾರೆ.
ನಾನು ಯಡಿಯೂರಪ್ಪ ವಿರೋಧಿ ಅಲ್ಲ. ಆದರೆ, ವಿಜಯೇಂದ್ರ(BY Vijayendra) ರಾಜ್ಯಾಧ್ಯಕ್ಷ ಆಗಿರುವುದಕ್ಕೆ ವಿರೋಧವಿದೆ. ವರಿಷ್ಠರು ಮುಂದಿನ ರಾಜ್ಯಾಧ್ಯಕ್ಷರನ್ನು ತೀರ್ಮಾನಿಸಬೇಕು. ಬಿಜೆಪಿಯ ಭ್ರಷ್ಟ ಎನ್ನುವ ಲೇಬಲ್ ವಿಜಯೇಂದ್ರ ಮೇಲಿದೆ. ಅವನು ನಮ್ಮ ಪಕ್ಷದ ನಾಯಕನಲ್ಲ ಎಂದರು. ಅನಂತ್ ಕುಮಾರ್ ನಿಧನವಾದ ಮೇಲೆ ಬಿಜೆಪಿಯಲ್ಲಿ ಯಾರೂ ಪ್ರಬಲ ನಾಯಕರಿಲ್ಲ. ಒಬ್ಬರ ಕೈಯಲ್ಲಿ ಆಡಳಿತ ಕೊಡುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ನೀಡುವಂತೆ ಮೊನ್ನೆ ಸಭೆಯಲ್ಲಿ ನಾವು ಹೇಳಿದ್ದೇವೆ. 15-20 ಜನರ ಸಾಮೂಹಿಕ ನಾಯಕತ್ವ ಇರಲಿ. ಒಬ್ಬರ ಕೈಗೆ ಪಕ್ಷ ಸಿಕ್ಕರೆ ಸರ್ವಾಧಿಕಾರಿ ದರೋಣೆ ಬರುತ್ತದೆ ಎಂದು ಹೇಳಿದ್ದೇವೆ ಅಂತಾ ಮಾಧ್ಯಮದವರಿಗೆ ತಿಳಿಸಿದರು.