ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪತಿಗೆ ಬ್ಲ್ಯಾಕ್ ಮೇಲ್ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಕನ್ನಡದ ಪೋಷಕ ನಟಿ ಹಾಗೂ ಯುಟ್ಯೂಬರ್ ಒಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಟಿ ಶಶಿಕಲಾ ಹಾಗೂ ಯುಟ್ಯೂಬರ್ ಅರುಣ್ ಕುಮಾರ್ ಎಂಬವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಶಶಿಕಲಾ ಪತಿ ಟಿ.ಜಿ ಹರ್ಷವರ್ಧನ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ನಿರ್ದೇಶಕರೊಬ್ಬರ ಕ್ಯಾಬ್ ಚಾಲಕನಾಗಿ ನಾನು ಕೆಲಸ ಮಾಡುತ್ತಿದ್ದೆ. ಶೂಟಿಂಗ್ ವೊಂದರ ವೇಳೆ 2021ರಲ್ಲಿ ಶಶಿಕಲಾ ಪರಿಚಯವಾಯಿತು. ನನ್ನೊಂದಿಗೆ ಇದ್ದರೆ ಸಿನಿಮಾದಲ್ಲಿ ಹಣ ಹೂಡಿಕೆ ಮಾಡುವುದಾಗಿ ಹೇಳಿದರು. ಸಿನಿಮಾ ನಿರ್ಮಾಣ ಮಾಡುತ್ತಾರೆಂದು ಒಪ್ಪಿಕೊಂಡೆ. ಆದರೆ, ಮದುವೆ ಆಗುವುದಿಲ್ಲವೆಂದು ಮೊದಲೇ ಹೇಳಿದ್ದೆ. ಅದಕ್ಕೆ ಒಪ್ಪಿದ ಅವರು ಮದುವೆಯಾಗುವಂತೆ ಬಲವಂತ ಮಾಡಲು ಶುರು ಮಾಡಿದರು. ಮೊಬೈಲ್ ಸಂಭಾಷಣಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಲು ಶುರು ಮಾಡಿದರು.
ಈ ಹಿಂದೆ ನನ್ನ ಮೇಲೆ ಹಲ್ಲೆ ನಡೆಸಿದರು. ಅನ್ನಪೂರ್ಣೇಶ್ವರ ನಗರ ಠಾಣೆಯಲ್ಲಿ ದೂರು ನೀಡಿದ್ದೆ. ಇಬ್ಬರಿಗೂ ಬುದ್ದಿ ಹೇಳಿ ಕಳಿಸಿದ್ದರು. ಮುಂದೆ 2022ರಲ್ಲಿ ನನ್ನ ಪೊಲೀಸರು ಬಂಧಿಸಿದರು. ಜೈಲಿನಿಂದ ಬಂದ ಬಳಿಕ ನನಗೆ ಸಿನಿಮಾ ನಿರ್ದೇಶನ ಮಾಡಲು ಸಹ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದಳು. ವೃತ್ತಿ ಜೀವನ ಹಾಳು ಮಾಡಕೋಬೇಡ. ಆಕೆಯನ್ನು ಮದುವೆಯಾಗು ಎಂದು ನಿರ್ಮಾಪಕರೊಬ್ಬರು ಹೇಳಿದರು. 2022 ಮಾರ್ಚ್ ನಲ್ಲಿ ಮದುವೆಯಾದೆ. ಕೆಲ ದಿನಗಳ ನಂತರ ಮನೆಗೆ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಬರಲು ಶುರು ಮಾಡಿದರು. ಇದನ್ನು ಪ್ರಶ್ನಿಸಿದರೆ ನನ್ನನ್ನೇ ಮನೆಯಿಂದ ಹೊರ ಹಾಕುತ್ತಿದ್ದರು. ಗಂಗೊಂಡಹಳ್ಳಿಯಲ್ಲಿ ಶಶಿಕಲಾ ಅನಾಥಾಶ್ರಮ ಶುರು ಮಾಡಿದಳು. ಕೇಳಿದರೆ ಕಪ್ಪು ಹಣ ಬದಲಾಯಿಸಲು ಅವಕಾಶ ಎಂದಳು. 2024 ಆಗಸ್ಟ್ ನಲ್ಲಿ ಮನೆಯಿಂದ ಹೊರ ಹಾಕಿದಳು. ಯುಟ್ಯೂಬರ್ ವೊಬ್ಬನ ಜೊತೆ ಸೇರಿಕೊಂಡು ನನ್ನ ಅಪಪ್ರಚಾರ ಮಾಡುತ್ತಿದ್ದು, ಇದನ್ನು ನಿಲ್ಲಿಸಲು ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಹರ್ಷವರ್ದನ್ ತಿಳಿಸಿದ್ದಾರೆ.