ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾಗಳ ಸಾಲಿನಲ್ಲಿ ಮುಂಗಾರುಮಳೆ ಹಾಗೂ ದುನಿಯಾ ಸಹ ಇವೆ. ಒಂದು ಸಂದರ ಪ್ರೇಮ ಕಾವ್ಯದ ಕಥೆ ಹೇಳಿದರೆ, ಇನ್ನೊಂದು ರಾ ರೌಡಿಸಂ, ತಾಯಿ ಪ್ರೀತಿಯ ಜೊತೆಗೆ ಪ್ರೇಮ ಸಂದೇಶ ಕೊಟ್ಟಿತ್ತು. ಆ ಸಂದರ್ಭದಲ್ಲಿ ನಟರಾದ ಗಣೇಶ್ ಹಾಗೂ ವಿಜಿ(Duniya Viji) ಅಷ್ಟೊಂದು ನೇಮ್ ಫೇಮ್ ಇರಲಿಲ್ಲ. ಅದರಲ್ಲಿನ ನಟಿಯರು ಸಹ ಹೊಸಬರೆ. ಗಣೇಶಗೆ ಪೂಜಾ ಗಾಂಧಿ ಜೋಡಿಯಾದರೆ, ವಿಜಿಗೆ ನಟಿ ರಶ್ಮಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಬ್ಯಾಕ್ ಟು ಬ್ಯಾಕ್ ಬಂದ ಗೆಳೆಯರಿಬ್ಬರ ಸಿನಿಮಾ ಬ್ಲಾಕ್ ಬ್ಲಸ್ಟರ್ ಆದವು. ಈಗ ನಟರಿಬ್ಬರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬರ್ತಿವೆ.
ಮುಂಗಾರುಮಳೆ(mungaramale) ಡಿಸೆಂಬರ್ 29, 2006ರಲ್ಲಿ ಬಿಡುಗಡೆಯಾದರೆ, 2007ರ ಶುರುವಿನಲ್ಲಿ ದುನಿಯಾ(duniya)ಸಿನಿಮಾ ರಿಲೀಸ್ ಆಯ್ತು. ಈಗ ಗೋಲ್ಡನ್ ಸ್ಟಾರ್ ಗಣೇಶ್(goldan star ganesh) ನಟನೆಯ ಕೃಷ್ಣಂ ಪ್ರಣಯ ಸಖಿ ಆಗಸ್ಟ್ 15ರಂದು ರಿಲೀಸ್ ಆಗುತ್ತಿದ್ದರೆ ದುನಿಯಾ ವಿಜಿ ನಟನೆಯ ಭೀಮ ಆಗಸ್ಟ್ 9ಕ್ಕೆ ಬಿಡುಗಡೆಯಾಗುತ್ತಿದೆ. ಒಂದು ಕಾಲದಲ್ಲಿ ಈ ಇಬ್ಬರು ನಟರು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಸೈಕಲ್ ಹೊಡೆದು, ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಇಂದು ಸ್ಟಾರ್ ನಟರಾಗಿದ್ದಾರೆ. ಪ್ರೀತಿ, ಪ್ರೇಮ, ತ್ಯಾಗದ ಕಥೆಗಳ ಮೂಲಕವೇ ಗೋಲ್ಡನ್ ಸ್ಟಾರ್ ಆದ ಗಣೇಶ್ ಈಗ ಕೃಷ್ಣಂ ಪ್ರಣಯ ಸಖಿ(Krishnam Pranaya Sakhi) ಎನ್ನುತ್ತಾ ಮತ್ತೊಂದು ಮೊಹಬತ್ ಹೇಳಲು ಬರುತ್ತಿದ್ದಾರೆ.
ಹೀರೋ ಆಗಿ ನಟಿಸಿದ ಮೊದಲ ಚಿತ್ರ ದುನಿಯಾದಲ್ಲಿಯೇ ಆ್ಯಕ್ಷನ್ ತೋರಿಸಿದ ವಿಜಯಕುಮಾರ್ ಇಂದಿಗೂ ಅದೇ ದಾರಿಯಲ್ಲಿಯೇ ಅಬ್ಬರಿಸುತ್ತಿದ್ದಾರೆ. ಜೊತೆಗೆ ನಿರ್ದೇಶಕನ ಕ್ಯಾಪ್ ಬೇರೆ ತೊಟ್ಟಿದ್ದಾರೆ. ಮೊದಲ ಬಾರಿಗೆ ಸಲಗ ಎನ್ನುವ ಸಿನಿಮಾ ಮಾಡಿ ಗೆದ್ದ ವಿಜಿ, ಈಗ ‘ಭೀಮ’ನಾಗಿ(Bheema) ಆಗಸ್ಟ್ 9ಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಸ್ನೇಹಿತರಿಬ್ಬರ ಸಿನಿಮಾಗಳು ದಶಕಗಳ ಬಳಿಕ ಬ್ಯಾಕ್ ಟು ಬ್ಯಾಕ್ ಬರುತ್ತಿದ್ದು ಸಿನಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿವೆ. 2006-07ರ ವರ್ಷ ಮರಳುತ್ತಾ ಕಾದು ನೋಡಬೇಕು.