ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕಾಮಗಾರಿಯ ಬಿಲ್ ಮಂಜೂರಾತಿಗೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತರ ಬಲೆಗೆ ಕೆಬಿಜೆಎನ್ಎಲ್ ನ ಇಬ್ಬರು ಅಧಿಕಾರಿಗಳು ಬಿದ್ದಿದ್ದಾರೆ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸೇವುಲಾಲ ಚವ್ಹಾಣ ಹಾಗೂ ಕಿರಿಯ ಅಭಿಯಂತರ ಸಾತಲಿಂಗಪ್ಪ ರೋಡಗಿ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಬಿಜೆಎನ್ಎಲ್ ನ ಕಾಮಗಾರಿ ಪೂರೈಸಿದ ನನ್ನ ಮಗ 3,71,419 ರೂಪಾಯಿ ಬಿಲ್ ಮಂಜೂರಾತಿಗೆ ಕೇಳಿದಾಗ ಝಳಕಿ ವಿಭಾಗಕ್ಕೆ ಕಳಿಸಲು ಸೇವುಲಾಲ ಅವರು 10 ಸಾವಿರ, ಸಾತಲಿಂಗಪ್ಪ 8 ಸಾವಿರ ರೂಪಾಯಿ ಲಂಚ ಕೇಳಿದ್ದಾರೆ ಎಂದು ನಾನಾಸಾಹೇಬ ರೂಡಗಿ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಲಂಚದ ಹಣ 18 ಸಾವಿರ ರೂಪಾಯಿ ಪಡೆಯುವಾಗ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ್, ಪೊಲೀಸ್ ಉಪಾಧೀಕ್ಷಕರಾದ ಮಲ್ಲಿಕಾರ್ಜುನ ಎಸ್.ತುಳಿಸಿಗೇರಿ ಅವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ ಆನಂದ ಟಕ್ಕನವರ್, ಆನಂದ ಡೋಣಿ, ನಿಂಗಪ್ಪ ಪೂಜೇರಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



