ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ದಿವಂಗತ ಎಂ.ಸಿ. ಮನಗೂಳಿಯವರ ಹಾಗೂ ಈ ಭಾಗದ ಜನತೆಯ ಕನಸಿಗೆ ಒತ್ತಾಸೆಯಾಗಿ ನಿಂತವರು ಸಿಂದಗಿ ಶಾಸಕ ಅಶೋಕ ಮನಗೂಳಿಯವರು. ಈ ಭಾಗದ ಬಹುದಿನಗಳ ಕಡಣಿ ಸೇತುವೆಗೆ ಭೂಮಿ ಪೂಜೆ ನೆರವೇರಿಸುವ ಕೆಲಸ ಮಾಡುವ ಮೂಲಕ ಈ ಭಾಗದ ಜನತೆಯ ಕನಸು ನನಸು ಮಾಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಲೋಕೋಪಯೋಗಿ ಇಲಾಖೆ, ಯುವ ಸಬಲೀಕರಣ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಆಲಮೇಲ ತಾಲೂಕು ಆಡಳಿತದ ಸಹಯೋಗದಲ್ಲಿ ಆಲಮೇಲ ಪಟ್ಟಣದಲ್ಲಿ ಗುರುವಾರ 145 ಕೋಟಿ ರೂ. ತೋಟಗಾರಿಕೆ ಕಾಲೇಜ್, 44 ಕೋಟಿ ರೂ. ವೆಚ್ಚದ ಕಡಣಿ ಬ್ರಿಡ್ಜ್, 3 ಕೋಟಿ ರೂ. ಕ್ರೀಡಾಂಗಣ, 25 ಕೋಟಿ ರೂ. ಆಲಮೇಲ ರಸ್ತೆ, 4 ಕೋಟಿ ರೂ. ವೆಚ್ಚದಲ್ಲಿ ಆಲಮೇಲದ ಪಟ್ಟಣದ ಒಳ ರಸ್ತೆಗಳ ಅಭಿವೃದ್ಧಿಗೆ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಇಷ್ಟೊಂದು ಅಭಿವೃದ್ಧಿ ಕಾಮಗಾರಿಗಳಿಂದಾಗಿ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಆಲಮೇಲ ಪಟ್ಟಣದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಶಾಸಕ ಅಶೋಕ ಮನಗೂಳಿ ಅವರು ನನ್ನ ಗಮನಕ್ಕೆ ತಂದಿದ್ದರು. ಅವರೆಲ್ಲ ಪ್ರಸ್ತಾವನೆಗಳಿಗೆ ನಾನು ಮಂಜೂರು ಮಾಡುವ ಮೂಲಕ ಈ ಭಾಗದ ಬಹುದಿನಗಳ ಬೇಡಿಕೆ ಈಡೇರಿಸಿದ್ದೇವೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಆಲಮೇಲ ತಾಲೂಕಿನಲ್ಲಿ ಇಂದು ದೊಡ್ಡ ಇತಿಹಾಸ ಸೃಷ್ಟಿಯಾಗಿದೆ. ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು, ಸರ್ಕಾದಿಂದ ಯತೇಚ್ಛ ಅನುದಾನ ಮಂಜೂರು ಮಾಡಿಸಿಕೊಳ್ಳುವುದರ ಮೂಲಕ ಈ ಊರನ್ನು ಅಭಿವೃದ್ಧಿಪಡಿಸಿದ್ದಾರೆ. ಈಗ ಈ ಊರು ಮುಂಬಯಿ ಮಾದರಿಯಲ್ಲಿ ಗೋಚರಿಸುತ್ತಿದೆ. ಇದಕ್ಕೆ ಶಾಸಕ ಅಶೋಕ ಮನಗೂಳಿ ಅವರೇ ಕಾರಣರಾಗಿದ್ದಾರೆ ಎಂದು ಬಣ್ಣಿಸಿದರು.

ಶಾಸಕ ಅಶೋಕ ಮನಗೂಳಿ ಅವರ ತಂದೆ ದಿ. ಎಂ.ಸಿ. ಮನಗೂಳಿ ಅವರು ಈ ಭಾಗದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಹಾಗೂ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜ್ ಸ್ಥಾಪನೆಯಾಗಬೇಕು ಎಂಬ ಕನಸು ಕಂಡಿದ್ದರು. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಲಲ್ಲಿ ಪಾದರಕ್ಷೆ ಧರಿಸದೇ ಹೋರಾಟ ಮಾಡಿದ್ದರು. ಅವರ ಹೋರಾಟದ ಪ್ರತಿಫಲವಾಗಿ ಇಂದು ಆಲಮೇಲ ಪಟ್ಟಣದಲ್ಲಿ ಅಭಿವೃದ್ಧಿಯ ಮಹಾಪರ್ವವೇ ಆರಂಭವಾಗಿದೆ ಎಂದ ಸಚಿವರು, ಶಾಸಕ ಅಶೋಕ ಮನಗೂಳಿ ಅವರು, ತಮ್ಮ ತಂದೆಯವರ ಕನಸು ನನಸು ಮಾಡಿದ್ದಾರೆ ಎಂದು ಬಣ್ಣಿಸಿದರು.
ಮಾಜಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬಹಳ ದಾಲಮೇಲನ್ನು ಅಭಿವೃದ್ಧಿ ಮಾಡಿದ ಕೀರ್ತಿ ಎಂ.ಸಿ. ಮನಗೂಳಿ ಹಾಗೂ ಅಶೋಕ ಮನಗೂಳಿ ಅವರಿಗೆ ಸಲ್ಲುತ್ತದೆ ಎಂದರು. ಆಲಮೇಲ ಹೊಸ ತಾಲೂಕು ಆಗುವುದರ ಜೊತೆಗೆ ಆಲಮೇಲದಲ್ಲಿ ಹೊಸ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ ಎಂದರು. ತೋಟಗಾರಿಕೆ ಕಾಲೇಜ್ ಆಲಮೇಲಗೆ ಆಗಬೇಕು ಎಂದು ಅಶೋಕ ಮನಗೂಳಿ ಅವರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದರು. ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಅವರು ಬಹುದಿನಗಳ ಬೇಡಿಕೆ ಈಡೇರಿಸಿದ್ದನ್ನು ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಅಶೋಕ ಮನಗೂಳಿ ಮಾತನಾಡಿದರು. ಈವೇಳೆ ಮಾಜಿ ಶಾಸಕ ಶರಣಪ್ಪ ಸುಣಗಾರ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಅಧ್ಯಕ್ಷರಾದಶ್ರೀ ಮತಿ ಕಾಂತಾ ನಾಯಕ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಬಿ.ಎಸ್. ಕೌಲಗಿ, ಬಾಗಲಕೋಟ ತೋಟಗಾರಿಕೆಗಳ ವಿಜ್ಞಾನಗಳ ಕುಲಪತಿಗಳಾದ ಡಾ.ವಿಷ್ಣುವರ್ಧನ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಇಲಿಯಾಸ ಬೋರಾಮಣಿ, ದೇವರಗುಡ್ಡದ ಡಾ. ಸಂದೀಪ ಪಾಟೀಲ, ಆಲಮೇಲದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.



