ಪ್ರಜಾಸ್ತ್ರ ಸುದ್ದಿ
ಯಡ್ರಾಮಿ(Yadrami): ಅಕ್ಕಿ ವ್ಯಾಪಾರಿಯಿಂದ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು ಬಾಕಿ ಹಣ ಪಡೆದುಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತರ ಕೈಗೆ ಪಿಎಸ್ಐ ಹಾಗೂ ಕಾನ್ಸ್ ಟೇಬಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಯಡ್ರಾಮಿ ಠಾಣೆಯ ಪಿಎಸ್ಐ ವಿಶ್ವನಾಥ ರೆಡ್ಡಿ ಮುದ್ರಡ್ಡಿ, ಕಾನ್ಸ್ ಟೇಬಲ್ ಸಿದ್ದಣ್ಣ ಬಿರಾದಾರ ಸಿಕ್ಕಿಬಿದ್ದಿದ್ದಾರೆ.
ಆನಂದಕುಮಾರ ಎಂಬುವರು ಅಕ್ಕಿ ವ್ಯಾಪಾರ ಮಾಡಲು ಮುಂದಾಗಿದ್ದರು. ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ನಾವು ಬಡವರು. ಅಷ್ಟೊಂದು ಹಣ ಎಲ್ಲಿಂದ ತರವುದು ಎಂದಿದ್ದಾರೆ. ಹಣ ಕೊಡದಿದ್ದರೆ ವ್ಯಾಪಾರ ಮಾಡಲು ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರಂತೆ. ನಂತರ ಪೋನ್ ಪೇ ಮೂಲಕ 20 ಸಾವಿರ ರೂಪಾಯಿ ಹಾಕಿಸಿಕೊಂಡಿದ್ದಾರೆ. ಉಳಿದ 30 ಸಾವಿರ ರೂಪಾಯಿ ಆದಷ್ಟು ಬೇಗ ಕೊಡಲು ಹೇಳಿದ್ದಾರೆ.
ಲಂಚ ಕೊಡಲು ಇಷ್ಟವಿಲ್ಲದ ಆನಂದಕುಮಾರ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಉಳಿದ ಹಣ ಕೊಡುವ ಸಂದರ್ಭದಲ್ಲಿ ದಾಳಿ ಮಾಡಿ ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.



