ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮಂಗಳವಾರ ಮುಂಜಾನೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ. ಬೆಳೆಗಾರರು, ವರ್ತಕರು, ಮಂಡಿ ಮಾಲೀಕರು ಜೊತೆಗೆ ಮಾತುಕತೆಯನ್ನು ಮುಖ್ಯಮಂತ್ರಿಯವರು ನಡೆಸಿದ್ದಾರೆ.
ಈ ವೇಳೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಇಟ್ಟನಹಳ್ಳಿ ಗ್ರಾಮದ ರೈತರು ಮುಖ್ಯಮಂತ್ರಿಯ ಮುಂದೆ, ಬೆಳೆ ವಿಮೆಗೆ ಸ್ವಸಹಾಯ ಸೊಸೈಟಿಗೆ ಹಣ ಕಟ್ಟಿದ್ದೇವೆ. ಆದರೆ, ಅಧಿಕಾರಿ ಡಿಸಿಸಿ ಬ್ಯಾಂಕಿಗೆ ಹಣ ಪಾವತಿ ಮಾಡದ ಕಾರಣ ನಮ್ಮ ವಿಮೆ ತಿರಸ್ಕೃತಗೊಂಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ರೈತರು ಹಣ ಪಾವತಿ ಮಾಡಿದ ಪಟ್ಟಿ ಪರಿಶೀಲಿಸಿದ ಸಿಎಂ ನಿರ್ಲಕ್ಷ್ಯ ವಹಿಸಿದ ಕಾರ್ಯದರ್ಶಿಯನ್ನು ವಜಾಗೊಳಿಸುವಂತೆ ಸೂಚನೆ ನೀಡಿದರು. 93 ರೈತರ ವಿಮೆ ತಿರಸ್ಕಾರಗೊಂಡಿದೆ.
ಕಲಬುರಗಿ, ಬೀದರ, ವಿಜಯಪುರ ಮಾರುಕಟ್ಟೆಯಲ್ಲಿ 8 ರಿಂದ 10 ಸಾವಿರ ರೂಪಾಯಿ ಕಮಿಷನ್ ಪಡೆಯುತ್ತಾರೆ. ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಕಮಿಷನ್ ಪಡೆಯಲ್ಲ. ಹೀಗಾಗಿ ಇಲ್ಲಿಗೆ ತಂದು ಹಾಕುತ್ತೇವೆ ಎಂದು ರೈತರು ಹೇಳಿದ್ದಾರೆ. ರೈತರಿಗೆ ತೂಕದಲ್ಲಿ ಮೋಸ, ಕಮಿಷನ್ ಪಡೆಯುವುದು ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.


