ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಅಬಕಾರಿ ಹೆಚ್ಚುವರಿ ಆಯುಕ್ತ, ಸಚಿವ ಸತೀಶ ಜಾರಕಿಹೊಳಿ ಭಾಮೈದ ವೈ.ಮಂಜುನಾಥ ಅವರ ಮನೆ, ಆಪ್ತರ ಮನೆಗಳ ಮೇಲೆ ಇಡಿ ಅಧಿಕಾರಿಗಳು ಬುಧುವಾರ ನಸುಕಿನಜಾವ ದಾಳಿ ಮಾಡಿದ್ದಾರೆ. ಹನುಮಾನ್ ನಗರದಲ್ಲಿರುವ ಮನೆ, ಬೆಂಗಳೂರಿನಲ್ಲಿ ಮಂಜುನಾಥನಿಗೆ ಸೇರಿದ ಅಪಾರ್ಟ್ ಮೆಂಟ್, ಮೈಸೂರು, ಅರಿಸಿಕೆರೆಯಲ್ಲಿರುವ ಆಪ್ತರ ಮನೆಗಳು, ಅಥಣಿ ತಾಲೂಕಿನ ಐನಾಪುರದಲ್ಲಿರುವ ಸ್ನೇಹಿತರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.
ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡಿದ ದಾಖಲೆಗಳು, ಜಮೀನು, ಬಾರ್ ಅಂಡ್ ರೆಸ್ಟೋರೆಂಟ್ ಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪನವರ ಮಗ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ ಭಾಮೈದ ಈ ವೈ. ಮಂಜುನಾಥ. ಇವರು ಅಕ್ರಮವಾಗಿ ವಿದೇಶಕ್ಕೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರಂತೆ.



