ಪ್ರಜಾಸ್ತ್ರ ಸುದ್ದಿ
ಮನಗೂಳಿ(Managuli): ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಗುರು-ಶಿಷ್ಯರ ಪರಂಪರೆ ಅತ್ಯಂತ ಪವಿತ್ರವಾದದ್ದು, ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಳಿಸಿಕೊಂಡು ಹೋಗಬೇಕು ಎಂದು ಮುಖ್ಯೋಪಾಧ್ಯಾಯ ಆರ್.ಕೆ. ಹನಗಂಡಿ ಅಭಿಪ್ರಾಯಪಟ್ಟರು. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಶ್ರೀ ಬಿ.ಎಸ್. ಪಾಟೀಲ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ 2004-05ನೇ ಸಾಲಿನ ಎಸ್ಸೆಸ್ಸೆಲ್ಸಿ ಹಳೆಯ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ “ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಗುರುಗಳಿಗೆ ವಂದನೆ ಸಲ್ಲಿಸುವುದು ಭಾರತೀಯ ಸಂಸ್ಕೃತಿಯ ಮಹತ್ವದ ಭಾಗ. ವಿದ್ಯಾರ್ಥಿಗಳು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ ಪರಿಹಾರ ಕಂಡುಕೊಳ್ಳಲು ಸಾಧ್ಯ” ಎಂದರು. ಇಂದಿನ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಹನಗಂಡಿ, “ಮಕ್ಕಳ ಕೈಗೆ ಮೊಬೈಲ್ ನೀಡುವ ಬದಲು ಉತ್ತಮ ಪುಸ್ತಕಗಳನ್ನು ನೀಡಿ ಓದಲು ಪ್ರೇರೇಪಿಸಬೇಕು. ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚುತ್ತಿದ್ದು, ಒಂದೇ ಲಿಂಕ್ ಕ್ಲಿಕ್ ಮಾಡಿದರೂ ಬ್ಯಾಂಕ್ ಖಾತೆ ಖಾಲಿಯಾಗುವ ಸ್ಥಿತಿ ಇದೆ. ಈ ಕುರಿತು ಎಲ್ಲರೂ ಎಚ್ಚರಿಕೆ ವಹಿಸಬೇಕು” ಎಂದು ಎಚ್ಚರಿಸಿದರು.

“ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು. ಅವರಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಜೀವನ ಹಾಗೂ ಆದರ್ಶ ಮೌಲ್ಯಗಳನ್ನು ಕಲಿಸಬೇಕು” ಎಂದು ಸಲಹೆ ನೀಡಿದ ಅವರು, ಪರಿಸರ ಸಂರಕ್ಷಣೆಗಾಗಿ ಸಾಧ್ಯವಾದಷ್ಟು ಗಿಡ-ಮರಗಳನ್ನು ನೆಡುವಂತೆ ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಚಾರ್ಯ ಎಸ್.ಎಸ್. ಬಿರಾದಾರ ಮಾತನಾಡಿ, “ಗುರುಗಳಿಗೆ ಗೌರವ ಸಲ್ಲಿಸುವ ಪರಂಪರೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. 22 ವರ್ಷಗಳ ಬಳಿಕ ಹಳೆಯ ವಿದ್ಯಾರ್ಥಿಗಳು ಒಂದಾಗಿ ಸೇರಿ ಗುರು ವಂದನಾ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ಸಂಗತಿ. ಶಿಕ್ಷಣ ಜ್ಞಾನ ನೀಡಿದರೆ, ಗುರು ಜೀವನದ ಜವಾಬ್ದಾರಿಯನ್ನು ಕಲಿಸುತ್ತಾನೆ. ಗುರು ಪರಂಪರೆ ಭಾರತೀಯ ಸಂಸ್ಕೃತಿಯ ಆಧಾರ ಸ್ತಂಭವಾಗಿದ್ದು, ಇಡೀ ವಿಶ್ವಕ್ಕೆ ಮಾದರಿಯಾಗಿದೆ” ಎಂದರು.

ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಸ್. ಮಾದರ ಮಾತನಾಡಿ, “ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅಂಕಗಳ ಹಿಂದೆ ಓಡುತ್ತಿರುವುದರಿಂದ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳು ಕುಗ್ಗುತ್ತಿವೆ. ಮೌಲ್ಯಾಧಾರಿತ ಶಿಕ್ಷಣವೇ ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯ” ಎಂದು ಪ್ರತಿಪಾದಿಸಿದರು. ಶಿಕ್ಷಕ ಎಂ.ಎಫ್. ನಾಯಕ ಭಾವುಕರಾಗಿ, “ತಾವು ಕಲಿಸಿದ ವಿದ್ಯಾರ್ಥಿಗಳಿಂದ ಗುರು ವಂದನೆ ಸ್ವೀಕರಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ವಿದ್ಯಾರ್ಥಿಗಳ ಪ್ರೀತಿ ಹಾಗೂ ವಿಶ್ವಾಸ ಶಿಕ್ಷಕರಿಗೆ ಅತಿದೊಡ್ಡ ಗೌರವ” ಎಂದರು.

ಶಿಕ್ಷಕಿ ಎಸ್.ಎಸ್. ಪೂಜಾರ ಮಾತನಾಡಿ, “ಗುರು-ಶಿಷ್ಯರ ಸಂಬಂಧ ತಂದೆ-ತಾಯಿ ಹಾಗೂ ಮಕ್ಕಳ ಸಂಬಂಧದಷ್ಟೇ ಪವಿತ್ರ. ನಾವು ಯಾವ ಹುದ್ದೆಯಲ್ಲಿದ್ದರೂ ನಮ್ಮ ಊರು, ನಮ್ಮ ಕುಟುಂಬ ಹಾಗೂ ನಮ್ಮ ನಾಡನ್ನು ಮರೆಯಬಾರದು” ಎಂದು ಕಿವಿಮಾತು ಹೇಳಿದರು. ಇದಕ್ಕೂ ಮುನ್ನ ಎಲ್ಲ ಶಿಕ್ಷಕರನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಸಂಗನಬಸು ಹುಲಗಬಾಳ್, ಗಣಮಠಯ್ಯಾ, ವಂದಾಲ್ ಸೇರಿದಂತೆ ಅನೇಕರು ತಮ್ಮ ಶಾಲಾ ದಿನಗಳ ಮಧುರ ನೆನಪುಗಳನ್ನು ಹಂಚಿಕೊಂಡರು. ನಂತರ ಶಿಕ್ಷಕರು ಹಾಗೂ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಕೊನೆಯಲ್ಲಿ ಪ್ರೀತಿಯ ಭೋಜನಕೂಟ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಸವರಾಜ ಮನಗೂಳಿ, ಎ.ಡಿ. ಚನ್ನಾಳ, ಕೆ.ಬಿ. ಕರಾಬಿ, ಸಂಗಪ್ಪ ಹಡಪದ ಸೇರಿದಂತೆ 2004-05ನೇ ಸಾಲಿನ ಎಲ್ಲ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭೀರಪ್ಪ ನಿಡಗುಂದಿ ಮತ್ತು ಸವಿತಾ ಹೊಸಮನಿ ಸ್ವಾಗತ ಗೀತೆ ಹಾಡಿದರು. ಮಲ್ಲು ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಹಾಗೂ ಬಸವರಾಜ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.




