ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ವಿದ್ಯುತ್ ಖಾಸಗೀಕರಣ ಮಾಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಮೊಹರೆ ಹನಮಂತರಾಯ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ತಲುಪಿ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಪದಾಧಿಕಾರಿಗಳು ಭಾಗವಹಿಸಿ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೆಳಗಾವಿ ವಿಭಾಗದ ಬಸನಗೌಡ ಧರ್ಮಗೊಂಡ, ವಿದ್ಯುತ್ ಖಾಸಗೀಕರಣ ಮಾಡುವ ಮೂಲಕ ಜನಸಮಾನ್ಯರ ಬದುಕಿನ ಮೇಲೆ ಬರೆ ಎಳೆಯುವ ಕೆಲಸ ಮಾಡಲಾಗುತ್ತಿದೆ. ಹೀಗೆ ಒಂದೊಂದೆ ಸರ್ಕಾರಿ ಇಲಾಖೆಗಳನ್ನು ಖಾಸಗೀಕರಣ ಮಾಡಿ ಸಾಮಾನ್ಯ ಜನರ ಆರ್ಥಿಕತೆಯನ್ನು, ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕಿಡಿ ಕಾರಿದರು. ಸಂಘದ ವಿವಿಧ ಪದಾಧಿಕಾರಿಗಳು, ರೈತ ಮುಖಂಡರು, ಸ್ಥಳೀಯರು ಭಾಗವಹಿಸಿದ್ದರು.



