ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿದ್ಯುತ್ ಜನಸಾಮಾನ್ಯರ ಮೂಲಭೂತ ಅತ್ಯಗತ್ಯವಾಗಿದ್ದು, ಅದನ್ನು ಲಾಭದ ಉದ್ದೇಶಕ್ಕೆ ಖಾಸಗಿ ಕಂಪನಿಗಳಿಗೆ ಒಳಪಡಿಸಬಾರದು. ರೈತರು ಮತ್ತು ಗ್ರಾಮೀಣ ಜನರ ಹಿತದೃಷ್ಟಿಯಿಂದ ವಿದ್ಯುತ್ ಸೇವೆಯನ್ನು ಸರ್ಕಾರವೇ ಮುಂದುವರಿಸಬೇಕು. ಈ ಸಂಬಂಧ ಸರ್ಕಾರ ಖಾಸಗೀಕರಣ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕಾಧ್ಯಕ್ಷ ಬಸವರಾಜ ರಂಜುಣಗಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ವಿದ್ಯುತ್ ಕ್ಷೇತ್ರದ ಖಾಸಗೀಕರಣ ನೀತಿ ಕೈಬಿಡಬೇಕು. ವಿದ್ಯುತ್ ಖಾಸಗೀಕರಣದಿಂದ ರೈತರು, ಬಡವರು ಹಾಗೂ ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತದೆ. ಕೃಷಿ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಕಡಿಮೆಯಾಗುವ ಆತಂಕವಿದೆ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.



