ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಬಸವಣ್ಣರು ಸಮಾನತೆ, ಸತ್ಯ ಮತ್ತು ಕಾಯಕದ ಮಹತ್ವವನ್ನು ಸಾರಿದ ಮಹಾನ್ ವ್ಯಕ್ತಿ. ಅವರ ಉಪದೇಶಗಳು ಇಂದಿನ ಸಮಾಜಕ್ಕೆ ಬಹಳ ಉಪಯುಕ್ತವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು. ಪಟ್ಟಣದ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಹಮ್ಮಿಕೊಂಡ 893ನೇ ಬಸವ ಜಯಂತಿ ಅಂಗವಾಗಿ ವಿಶ್ವಗುರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಬಸವಣ್ಣನವರು 12ನೇ ಶತಮಾನದ ಮಹಾನ್ ಸಮಾಜ ಸುಧಾರಕ. ದಾರ್ಶನಿಕ ಹಾಗೂ ವಚನಕಾರ. ಅವರು ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಹೊಂದಿದ್ದಾರೆ. ಸಮಾನತೆ, ಸತ್ಯ, ಧರ್ಮ ಮತ್ತು ಶ್ರದ್ಧೆಯ ಮೌಲ್ಯಗಳನ್ನು ಸಾರಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಬಸವಣ್ಣನವರ ವಿಚಾರಧಾರೆಗಳು ವಿಶ್ವಮಟ್ಟದಲ್ಲಿ ವ್ಯಾಪಿಸಿ ಹಲವಾರು ಭಾಷೆಯ ಜನರು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅವರು ವಿಶ್ವವ್ಯಾಪಿಯಾಗಲು ಕಾರಣ ಯಾವುದೇ ಧರ್ಮದ ವ್ಯಕ್ತಿಯೆಂದಲ್ಲ. ಬದಲಿಗೆ ಅವರ ವಿಚಾರಧಾರೆಗಳು ಅವರನ್ನು ವಿಶ್ವಮಾನವನನ್ನಾಗಿಸಿವೆ. ಮಹಿಳೆಯರಿಗೂ ಸಮಾನತೆ ತಂದುಕೊಟ್ಟ ಭಾರತದ ಸಾಂಸ್ಕೃತಿಕ ನಾಯಕ. ಬಸವಣ್ಣನವರ ಪ್ರತಿ ವಚನಗಳು ವೈಜ್ಞಾನಿಕ ದೃಷ್ಠಿಕೋನದಿಂದ ಕೂಡಿವೆ. ಅವರ ಆಶೆಯದಂತೆ ನಾವೆಲ್ಲರೂ ನಡೆದುಕೊಂಡರೇ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದರು.
ತಾಲೂಕಾಧ್ಯಕ್ಷ ವೈ.ಸಿ.ಮಯೂರ ಮಾತನಾಡಿ, ವಿಶ್ವಗುರು ಬಸವಣ್ಣನವರು ಭಾತೃತ್ವ ತತ್ವದಡಿ ಸಮ ಸಮಾಜವನ್ನು ನಿರ್ಮಾಣ ಮಾಡಿದರು. ಜಗತ್ತಿನ ಪ್ರಥಮ ಸಂಸತ್ತು ಅನುಭವ ಮಂಟಪ ಕಟ್ಟಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು. ಸಾಹಿತಿ ಎಂ.ಆರ್.ಡೋಣಿ, ಶಿವಕುಮಾರ ಶಿವಸಿಂಪಿಗೇರ, ಎಸ್.ಎಂ.ಚಿಗರಿ, ಜಗದೇವಿ ಬಿರಾದಾರ, ಶೈಲಜಾ ಸ್ಥಾವರಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ ದೇವರಹಿಪ್ಪರಗಿ ಕಸಾಪ ಅಧ್ಯಕ್ಷ ಸಿದ್ದು ಮೇಲಿನಮನಿ, ಎಸ್.ಎಸ್.ಸಾತಿಹಾಳ, ವರ್ಷಾ ಪಾಟೀಲ, ಶಾಂತಪ್ಪ ರಾಣಾಗೋಳ, ಅನುಸೂಯಾ ಪಾರಗೊಂಡ, ರಾಜಕುಮಾರ ನರಗೋದಿ, ಶೈನಾಬಿ ಮಸಳಿ, ಕಾವೇರಿ ಡೋಣೂರ, ಅಂಬರೀಶ ಚೌಗಲೆ, ರೇವಣಸಿದ್ದ ತಳವಾರ, ನೀಲಕಂಠ ಹೊಸಮನಿ, ಪ್ರತಿಭಾ ಚಳ್ಳಗಿ, ಜ್ಞಾನೇಶ ಗುರವ ಸೇರಿದಂತೆ ಹಲವರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಆನಂದ ಶಾಬಾದಿ ಸ್ವಾಗತಿಸಿ, ನಿರೂಪಿಸಿದರು.




