Ad imageAd image

ಶಿಕ್ಷಣ ಕೇವಲ ಸಂಪಾದನೆ ಮಾರ್ಗವಲ್ಲ ಆತ್ಮವಿಶ್ವಾಸದ ಮಾರ್ಗ: ರಾಜ್ಯಪಾಲ ಗೆಹ್ಲೋಟ್

Nagesh Talawar
ಶಿಕ್ಷಣ ಕೇವಲ ಸಂಪಾದನೆ ಮಾರ್ಗವಲ್ಲ ಆತ್ಮವಿಶ್ವಾಸದ ಮಾರ್ಗ: ರಾಜ್ಯಪಾಲ ಗೆಹ್ಲೋಟ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಅಕ್ಕಮಹಾದೇವಿಯವರ ಹೆಸರಿನ ವಿಶ್ವವಿದ್ಯಾಲಯವು ಮಹಿಳಾ ಶಿಕ್ಷಣ, ಸಬಲೀಕರಣ, ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಉಜ್ವಲ ಕೇಂದ್ರವಾಗಿದೆ ಎಂದು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಜವಾದ ಜ್ಞಾನವು ವ್ಯಕ್ತಿಯನ್ನು ಸ್ವತಂತ್ರ, ನಿರ್ಭೀತ ಮತ್ತು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂಬ ಸಂದೇಶವನ್ನು ಅಕ್ಕಮಹಾದೇವಿ ಅವರು ತಮ್ಮ ಜೀವನದ ಮೂಲಕ ನೀಡಿದರು. ಶಿಕ್ಷಣವು ಜ್ಞಾನ ಸಂಪಾದನೆಯ ಮಾರ್ಗ ಮಾತ್ರವಲ್ಲದೆ, ಆತ್ಮ ವಿಶ್ವಾಸ ಮತ್ತು ಸಾಮಾಜಿಕ ಸೇವೆಯ ಮಾರ್ಗವಾಗಿದೆ ಎಂದ ಅವರ ಆದರ್ಶಗಳು ನಮಗೆ ಸ್ಫೂರ್ತಿ ನೀಡುತ್ತವೆ ಎಂದರು.

ಶಿಕ್ಷಣದಲ್ಲಿ ಪಡೆದ ಪದವಿ ಜ್ಞಾನಕ್ಕೆ ಸಾಕ್ಷಿಯಾಗಿರುವುದರ ಜೊತೆಗೆ ಶಿಸ್ತು, ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಸಂಕೇತವಾಗಿದೆ. ಈ ಯುಗವು ಅವಕಾಶಗಳು ಮತ್ತು ಸವಾಲುಗಳಿಂದ ಕೂಡಿದೆ. ಅಂತಹ ಪರಿಸ್ಥಿತಿಯಲ್ಲಿ, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಮತ್ತು ಸೂಕ್ಷ್ಮತೆಯ ಜೊತೆಗೆ ಜ್ಞಾನವನ್ನು ಕೊಂಡೊಯ್ಯಬೇಕಾಗುತ್ತದೆ. ಪ್ರಸ್ತುತ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಯುಗ. ಡಿಜಿಟಲ್ ಇಂಡಿಯಾ, ಸ್ಟಾರ್ಟಆಪ್‌ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ವೋಕಲ್ ಫಾರ್ ಲೋಕಲ್‌ನಂತಹ ಉಪಕ್ರಮಗಳ ಮೂಲಕ ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ಉಪಸ್ಥಿತಿಯನ್ನು ವೇಗವಾಗಿ ಬಲಪಡಿಸುತ್ತಿದೆ. ಈ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿವಿಯ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್ ಮಾತನಾಡಿ, ವ್ಯಾಖ್ಯಾನ ವಿಶ್ಪವಿದ್ಯಾಲಯಗಳು ನೀಡುವ ಪದವಿ ಪ್ರಮಾಣ ಪತ್ರಗಳಿಂದ ವಿದ್ಯಾರ್ಥಿಗಳ ಭವಿಷ್ಯ ಅರಳುವುದಿಲ್ಲ. ಪದವಿಯೊಟ್ಟಿಗೆ ಕೌಶಲ್ಯಗಳು, ಉದ್ಯೋಗಾರ್ಹತೆ ಮತ್ತು ಜೀವನಪೂರ್ತಿ ಕಲಿಕೆ ಮತ್ತು ಹೊಂದಾಣಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುತ್ತದೆ ಎಂದರು. ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬರುವ ದಿನಗಳಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗಲೇ ಗಳಿಕೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಿಗೆ ಬಯೋಡೀಸೆಲ್ ಘಟಕ, ಕಾಗದ ಮರುಬಳಕೆ ಘಟಕ, ಅನನ್ಯ ಆಹಾರ ಸಂಸ್ಕರಣಾ ಕೇಂದ್ರ ಮತ್ತು ಗ್ರೀನ್‌ಹೌಸ್‌ಗಳಲ್ಲಿ ವಿವಿಧ ಕೌಶಲಗಳನ್ನು ಕಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು.

ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಡಾ.ಸಂಗೀತಾ ಎನ್ ಕಟ್ಟಿಮನಿ ಮತ್ತು ಆಶಾದೇವಿ ಜಗದೀಶ ಗುಡಗುಂಟಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲರು ನೀಡಿದರು. ಈ ವೇಳೆ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್.ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article