ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದ ಜನರ ಮೇಲೆ ದರ ಏರಿಕೆ ಬರೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಾಲಿನ ದರದ ಬಳಿಕ ಇದೀಗ ಬಸ್ ಟಿಕೆಟ್ ದರವನ್ನು ಸರ್ಕಾರ ಏರಿಕೆ ಮಾಡಿದೆ. ಕೆಎಸ್ಆರ್ ಟಿಸಿ ಬಸ್ ಟಿಕೆಟ್ ದರ ಶೇಕಡ 23ರಷ್ಟು ಹಾಗೂ ಬಿಎಂಟಿಸಿ ಟಿಕೆಟ್ ದರ ಶೇಕಡ 35ರಷ್ಟು ಏರಿಕೆ ಮಾಡಲಾಗಿದೆ.
ಬುಧವಾರ ಮಧ್ಯರಾತ್ರಿಯಿಂದಲೇ ಈ ದರ ಜಾರಿಗೆ ಬರಲಿದೆ. ಮಾಧ್ಯಮಗೋಷ್ಠಿಯಲ್ಲಿ ಸಾರಿಗೆ ಸಚಿವ ಭೈರತಿ ಸುರೇಶ ಅವರು ಈ ಬಗ್ಗೆ ತಿಳಿಸಿದ್ದಾರೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಹೀಗಾಗಿ ಬಸ್ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಎಂದಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಹೊರೆಯಾಗಲಿದೆ.
ಬಿಎಂಟಿಸಿ ಕನಿಷ್ಠ 6 ರಿಂದ 10 ರೂಪಾಯಿ, ಗರಿಷ್ಠ 35 ರಿಂದ 40 ರೂಪಾಯಿ ಏರಿಕೆ. ಬಿಎಂಟಿಸಿಯ ವಜ್ರವಾಯು ಟಿಕೆಟ್ ದರ ಕನಿಷ್ಠ 15 ರಿಂದ 20 ರೂಪಾಯಿ, ಗರಿಷ್ಠ 75 ರಿಂದ 90 ರೂಪಾಯಿ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.


