ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮುಂದಿನ ಹತ್ತು ವರ್ಷಗಳ ಸರ್ಕಾರದ ಯೋಜನೆಗಳು, ಬಜೆಟ್ ಹಂಚಿಕೆ, ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನ ಹಾಗೂ ಕ್ಷೇತ್ರಗಳ ಪುನರ್ವಿಂಗಡಣೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳಿಗೆ ಜನಗಣತಿಯ ಮಾಹಿತಿ ಆಧಾರವಾಗಲಿದೆ. ಆದ್ದರಿಂದ ಭಾರತದ ಜನಗಣತಿ-2027ರ ಮನೆಗಳ ಪಟ್ಟಿ ಮತ್ತು ಜನಸಂಖ್ಯಾ ಗಣತಿ ಕಾರ್ಯವನ್ನು ಯಾವುದೇ ತಪ್ಪುಗಳಿಲ್ಲದಂತೆ ನಿಖರವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಭಾರತದ ಜನಗಣತಿ-2027ರ ಎರಡನೇ ಹಂತದ ಜನಸಂಖ್ಯಾ ಗಣತಿಗೆ ಸಂಬಂಧಿಸಿದಂತೆ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಚಾರ್ಜ್ ಅಧಿಕಾರಿಗಳು, ಸಹಾಯಕ ಚಾರ್ಜ್ ಅಧಿಕಾರಿಗಳು, ವಿಷಯ ನಿರ್ವಾಹಕರು ಮತ್ತು ತಾಂತ್ರಿಕ ನಿರ್ವಾಹಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಗಣತಿಯು ಹತ್ತು ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಕಾರ್ಯವಾಗಿದೆ. ಇದರಲ್ಲಿ ಸಂಗ್ರಹಿಸುವ ಮಾಹಿತಿಯ ಆಧಾರದ ಮೇಲೆ ಮುಂದಿನ ಹತ್ತು ವರ್ಷಗಳ ಅಭಿವೃದ್ಧಿ, ಆರ್ಥಿಕ ಮತ್ತು ಸಾಮಾಜಿಕ ಯೋಜನೆಗಳನ್ನು ರೂಪಿಸಲಾಗುತ್ತದೆ. ಹೀಗಾಗಿ ಪ್ರತಿಯೊಂದು ಮನೆ, ಕುಟುಂಬ ಹಾಗೂ ವ್ಯಕ್ತಿಯ ಮಾಹಿತಿಯನ್ನು ಸರಿಯಾಗಿ ದಾಖಲಿಸಬೇಕು. ಯಾವುದೇ ಮನೆ ಅಥವಾ ವ್ಯಕ್ತಿ ಗಣತಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದರು. ಜನಗಣತಿ ಕಾರ್ಯ ಸುಗಮವಾಗಿ ನಡೆಯಲು ಮೊದಲು ಮುಖ್ಯ ತರಬೇತಿದಾರರಿಗೆ, ನಂತರ ತಾಲೂಕು ಮಟ್ಟದ ತರಬೇತಿದಾರರಿಗೆ ಹಾಗೂ ಅಂತಿಮವಾಗಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಹಂತ ಹಂತವಾಗಿ ತರಬೇತಿ ನೀಡಲಾಗುತ್ತದೆ. ಗಣತಿದಾರರು ಒಟ್ಟು 40 ಪ್ರಶ್ನೆಗಳಿಗೆ ಸಂಬAಧಿಸಿದ ಮಾಹಿತಿಯನ್ನು ಹೇಗೆ ಸಂಗ್ರಹಿಸಬೇಕು ಹಾಗೂ ಗಣತಿದಾರರ ಕೈಪಿಡಿಯಲ್ಲಿರುವ ಸೂಚನೆಗಳನ್ನು ಹೇಗೆ ಪಾಲಿಸಬೇಕು ಎಂಬುದರ ಕುರಿತು ತರಬೇತಿ ನೀಡಲಾಗುತ್ತಿದೆ. ತರಬೇತಿಯಲ್ಲಿ ತಿಳಿಸುವ ಎಲ್ಲ ಅಂಶಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ನಿಗದಿತ ಅವಧಿಯಲ್ಲಿ ಗಣತಿ ಪೂರ್ಣಗೊಳಿಸಿ: ಹಿಂದಿನ ಜನಗಣತಿ ಸಂದರ್ಭದಲ್ಲಿ ಮನೆಗಳ ಸಂಖ್ಯೆ ಗುರುತಿಸುವುದು, ನಂಬರ್ ಹಾಕುವುದು ಹಾಗೂ ಗುರುತು ಮಾಡುವ ಕಾರ್ಯಕ್ಕೆ ಆರಂಭದ ಕೆಲವು ದಿನಗಳು ವ್ಯಯವಾಗಿದ್ದವು. ಇದರಿಂದ ಗಣತಿ ಕಾರ್ಯದ ಪ್ರಗತಿಗೆ ತೊಂದರೆಯಾಗಿತ್ತು. ಈ ಬಾರಿ ಅಂತಹ ಸಮಸ್ಯೆ ಆಗದಂತೆ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಜನವರಿ 10ರಿಂದ 24ರವರೆಗೆ ಸ್ವಯಂ ಗಣತಿಗೆ ಅವಕಾಶವಿರುತ್ತದೆ. ಜನವರಿ 21ರಿಂದಲೇ ಗಣತಿದಾರರು ಮತ್ತು ಮೇಲ್ವಿಚಾರಕರು ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಮನೆಗಳ ಸಂಖ್ಯೆ, ಗಡಿ ಹಾಗೂ ತಮ್ಮ ಕಾರ್ಯವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಬೇಕು. ಗಣತಿದಾರರಿಗೆ ನೇಮಕಾತಿ ಆದೇಶ ಮತ್ತು ಗುರುತಿನ ಚೀಟಿ ನೀಡಬೇಕು. ಅವರಿಗೆ ನಿಗದಿಪಡಿಸಿದ ನಕ್ಷೆಯಲ್ಲಿರುವ ಎಲ್ಲ ಮನೆಗಳಿಗೆ ಮುಂಚಿತವಾಗಿ ಭೇಟಿ ನೀಡಿ ಮನೆಗಳನ್ನು ಗುರುತಿಸಿ, ಸಂಖ್ಯೆ ಹಾಕುವ ಕಾರ್ಯ ಪೂರ್ಣಗೊಳಿಸಬೇಕು. ಜನವರಿ 25ರಿಂದ ಫೆಬ್ರವರಿ 28ರವರೆಗೆ ಮನೆಗಳ ಪಟ್ಟಿ ಮತ್ತು ಜನಗಣತಿ ಕಾರ್ಯವನ್ನು ಪೂರ್ಣಗೊಳಿಸಬೇಕು. ಜನವರಿ 25ರಿಂದಲೇ ಮಾಹಿತಿ ದಾಖಲಿಸುವ ಕಾರ್ಯ ಆರಂಭವಾಗುವಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಿ, ಜನಗಣತಿಯ ಎಲ್ಲ ಮಾಹಿತಿಯನ್ನು ಸಿಎಂಎಂಎಸ್ ಆ್ಯಪ್ ಮೂಲಕ ಮೊಬೈಲ್ನಲ್ಲಿ ದಾಖಲಿಸಬೇಕು. ಆ್ಯಪ್ ಅನ್ನು ಅನಗತ್ಯವಾಗಿ ತೆಗೆದುಹಾಕಿ ಮತ್ತೆ ಅಳವಡಿಸಬಾರದು. ಕಾಲಕಾಲಕ್ಕೆ ಬರುವ ಹೊಸ ಆವೃತ್ತಿಗಳನ್ನು ಮಾತ್ರ ಅಪ್ಡೇಟ್ ಮಾಡಿಕೊಳ್ಳಬೇಕು. ಆಂಡ್ರಾಯ್ಡ್ ಮತ್ತು ಆ್ಯಪಲ್ ಮೊಬೈಲ್ಗಳಲ್ಲಿ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು.
ಗಣತಿದಾರರು ಮತ್ತು ಮೇಲ್ವಿಚಾರಕರು ಆ್ಯಪ್ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಪ್ರತಿ ಕುಟುಂಬದ ಮಾಹಿತಿಯನ್ನು ದಾಖಲಿಸಿದ ಕೂಡಲೇ ಆ್ಯಪ್ನಲ್ಲಿ ಸಿಂಕ್ ಮಾಡಬೇಕು. ಸಂಗ್ರಹಿಸುವ ಎಲ್ಲ ಮಾಹಿತಿಯ ಗೌಪ್ಯತೆಯನ್ನು ಕಾಪಾಡಬೇಕು ಎಂದು ಸೂಚಿಸಿದರು. ಯಾರೂ ಗಣತಿಯಿಂದ ಹೊರಗುಳಿಯದಂತೆ ಎಚ್ಚರ ವಹಿಸಿ: ಸಾಮಾನ್ಯ ಮನೆಗಳ ಜತೆಗೆ ವಸತಿಯೇತರ ಕಟ್ಟಡಗಳು, ಮನೆ ಇಲ್ಲದವರು, ಪ್ರತ್ಯೇಕ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳು, ಹಾಸ್ಟೆಲ್ಗಳು, ಪಿಜಿಗಳು, ಅನಾಥಾಶ್ರಮಗಳು, ಬಾಲಮಂದಿರಗಳು ಹಾಗೂ ವಿವಿಧ ಸಂಸ್ಥೆಗಳ ವಸತಿ ಕಟ್ಟಡಗಳನ್ನೂ ಗಣತಿ ವ್ಯಾಪ್ತಿಗೆ ಒಳಪಡಿಸಬೇಕು. ಯಾವುದೇ ಮನೆ ಅಥವಾ ವ್ಯಕ್ತಿಯ ಮಾಹಿತಿ ಬಿಟ್ಟುಹೋಗದಂತೆ ಎಚ್ಚರಿಕೆ ವಹಿಸಬೇಕು.ಜನಗಣತಿಯ ಮಹತ್ವ ಅರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಪ್ರಕಾಶ ಮೀನಾ ಮಾತನಾಡಿ, ಜನಗಣತಿಯಲ್ಲಿ ಸಂಗ್ರಹಿಸುವ ಮಾಹಿತಿಯು ನಿಖರವಾಗಿರಬೇಕು. ಯಾವುದೇ ಮನೆ ಅಥವಾ ವ್ಯಕ್ತಿ ಗಣತಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಗಮನಹರಿಸಬೇಕು. ತರಬೇತಿಯಲ್ಲಿ ನೀಡುವ ಸೂಚನೆಗಳನ್ನು ಸರಿಯಾಗಿ ಪಾಲಿಸಿ, ಕ್ಷೇತ್ರಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಜನಗಣತಿ ಕಾರ್ಯ ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ, ವಿಜಯಪುರ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ತರಬೇತಿದಾರ ವಿನೇಶ ಅವರು ಜನಗಣತಿ ಕಾರ್ಯದ ವಿಧಾನ, ಮಾಹಿತಿ ಸಂಗ್ರಹ, ಮೊಬೈಲ್ ಆ್ಯಪ್ ಬಳಕೆ ಹಾಗೂ ಗಣತಿದಾರರು ಮತ್ತು ಮೇಲ್ವಿಚಾರಕರ ಜವಾಬ್ದಾರಿಗಳ ಕುರಿತು ತರಬೇತಿ ನೀಡಿದರು.


