LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ

ವಿಶೇಷ ಲೇಖನ: ಬಸವ ಪಾಟೀಲ ಕೊಂಡಗೂಳಿ, ಲಂಡನ್

ಭಾರತೀಯ ಸಮಾಜದ ಹಳ್ಳಿಯ ಭೌತಿಕ ವಿನ್ಯಾಸವನ್ನು ಗಮನಿಸಿದರೆ ಅದೊಂದು ಅಪ್ಪಟ ಘನೀಕೃತ ‘ಸ್ಥಾವರ’ ಮಾದರಿ. ಹಳ್ಳಿಯ ಹೃದಯಭಾಗದಲ್ಲಿ ಕೇವಲ ಪೂಜೆಯ ತಾಣವಲ್ಲ, ಇಡೀ ನೆಲದ ಮೇಲೆ ಆಧಿಪತ್ಯ ಸಾಧಿಸುವ ಕ್ಷೇತ್ರಾಧಿಪತಿಯ ‘ದೇವಸ್ಥಾನ’ ವಿರಾಜಮಾನವಾಗಿರುತ್ತದೆ. ಆ ಕ್ಷೇತ್ರಾಧಿಪತಿಯ ಅಧಿಕಾರದ ನೆರಳಲ್ಲೇ ಮೇಲ್ಜಾತಿಗಳ ಅಗ್ರಹಾರ, ವಾಡಿಕೆಗಳಿರುತ್ತವೆ. ಅವರ ಸುತ್ತ ಅವರಿಗೆ ಅಗತ್ಯ ಸೇವೆ ಒದಗಿಸುವ ಆಶ್ರಿತ ಜಾತಿಗಳು, ಮತ್ತು ಊರಿನ ಕಟ್ಟಕಡೆಯ ಪರಿಧಿಯಾಚೆಗೆ ಅಸ್ಪೃಶ್ಯ ಕಾಯಕಜೀವಿಗಳ ಕೇರಿಗಳು. ಶತಮಾನಗಳು ಉರುಳಿದರೂ, ಅದೆಷ್ಟೋ ಸುಧಾರಣಾವಾದಿಗಳು ಹೋರಾಡಿದರೂ ಈ ಭೌಗೋಳಿಕ ಶ್ರೇಣೀಕರಣದ, ಕ್ಷೇತ್ರಾಧಿಪತಿಯ ದೇವಸ್ಥಾನ ಕೇಂದ್ರೀಕೃತ ವ್ಯವಸ್ಥೆ ಪೂರ್ಣವಾಗಿ ಸಾಯಲಿಲ್ಲ.

ನಗರಕ್ಕೆ ಬಂದರೆ ಈ ಸ್ಥಾವರತ್ವ ಬದಲಾಯಿತೇ? ನಗರ ಮೇಲ್ನೋಟಕ್ಕೆ ಚಲನಶೀಲ, ಅಂದರೆ ‘ಜಂಗಮ’ದಂತೆ ಭಾಸವಾಗುತ್ತದೆ. ಆದರೆ ಅಲ್ಲಿಯೂ ಜಾತಿಯ ಸ್ಥಾವರತೆಯು ಆರ್ಥಿಕ ಬಂಡವಾಳದ ರೂಪ ಧರಿಸಿ ಹೊಸ ಹೈರಾರ್ಕಿಯನ್ನು ಸೃಷ್ಟಿಸಿದೆ. ನಗರದ ಕೇಂದ್ರಗಳಲ್ಲಿ ಆಡಳಿತ, ವ್ಯಾಪಾರ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಕಾರ್ಪೊರೇಟ್ ಶಕ್ತಿ ಕೇಂದ್ರಗಳು ಹೊಸ ಕಾಲದ ದೇವಸ್ಥಾನಗಳಂತೆ ಬೀಗಿ ನಿಂತಿವೆ. ಆದರೆ ಈ ಇಡೀ ನಗರಕ್ಕೆ ಹಗಲಿರುಳು ಜೀವತುಂಬುವ, ಮುಂಚೂಣಿಯಲ್ಲಿ ನಿಲ್ಲುವ ಓರ್ವ ನರ್ಸ್ ಅಥವಾ ಕಾಯಕಜೀವಿಗೆ ಆ ನಗರದ ಕೇಂದ್ರದಲ್ಲೊಂದು ಸ್ವಂತ ಸೂರು ಹೊಂದುವುದು ಇಂದಿಗೂ ಕನಸು. ಹಳ್ಳಿಯ ಪರಿಧಿಯಿಂದ ಹೊರದಬ್ಬಲ್ಪಟ್ಟ ಕಾಯಕ, ನಗರದಲ್ಲೂ ಬಂಡವಾಳಶಾಹಿ ಆರ್ಥಿಕತೆಯ ಹೆಸರಿನಲ್ಲಿ ಹೊರವಲಯಕ್ಕೆ ನೂಕಲ್ಪಡುತ್ತದೆ.

ಇಂತಹ ಸ್ಥಾವರ ಅಧಿಕಾರ ಕೇಂದ್ರಗಳನ್ನು ಮುರಿದು, ಅಂಚಿನಲ್ಲಿರುವ ಮನುಷ್ಯನಿಗೆ ಸ್ವಾಭಿಮಾನ ನೀಡಲು ಭಾರತೀಯ ನೆಲದಲ್ಲಿ ಎರಡು ಮಹತ್ತರ ಕ್ರಾಂತಿಗಳು ಸಂಭವಿಸಿದವು. ಮೊದಲನೆಯದು 12ನೇ ಶತಮಾನದ ಬಸವಾದಿ ಶರಣರ ಚಳವಳಿ. ಕ್ಷೇತ್ರಾಧಿಪತಿಯ ದೇವಸ್ಥಾನದ ಗರ್ಭಗುಡಿಯೊಳಗೆ ಬಂಧಿಯಾಗಿದ್ದ, ಮಧ್ಯವರ್ತಿಗಳ ಹಿಡಿತದಲ್ಲಿದ್ದ ದೈವತ್ವವನ್ನು ಶರಣರು ಕಿತ್ತು ತಂದು ಪ್ರತಿಯೊಬ್ಬ ಕಾಯಕಜೀವಿಯ ಅಂಗೈಗೆ ಕೊಟ್ಟರು. "ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ" ಎಂದು ಬಸವಣ್ಣ ಹಾಡಿದಾಗ, ಅದು ಕೇವಲ ಆರಾಧನೆಯ ಬದಲಾವಣೆಯಾಗಿರಲಿಲ್ಲ; ಕಟ್ಟಕಡೆಯ ಶೋಷಿತನಿಗೂ ದೊರೆತ ಸಾಟಿಯಿಲ್ಲದ ಆತ್ಮಗೌರವ. ಶಕ್ತಿ ಕೇಂದ್ರದ ದೇವಸ್ಥಾನದಲ್ಲಿದ್ದ ದೇವರನ್ನು ಒಡೆದು ಕರಸ್ಥಲದ ಇಷ್ಟಲಿಂಗವಾಗಿಸಿದಾಗ ಶ್ರೇಣೀಕೃತ ಸಮಾಜದ ಬುಡವೇ ಅಲ್ಲಾಡಿತು.

ಆದರೆ ಈ ಸಮಾನತೆಯನ್ನು ಅಂದಿನ ಸ್ಥಾವರ ರಾಜಪ್ರಭುತ್ವ ಸಹಿಸಲಿಲ್ಲ. ಹರಳಯ್ಯ-ಮಧುವಯ್ಯನವರ ಮೇಲೆ ಎಳೆಹೂಟೆಯ ಶಿಕ್ಷೆ ಹೇರಿ, ಕಲ್ಯಾಣವನ್ನು ಧ್ವಂಸ ಮಾಡಿ ಶರಣರನ್ನು ಒಕ್ಕಲೆಬ್ಬಿಸಲಾಯಿತು. ಆ ಐತಿಹಾಸಿಕ ವಿಪ್ಲವ ಮತ್ತು ಸಮ ಸಮಾಜದ ಕನಸು ಭಗ್ನಗೊಂಡ ಮಹಾವೇದನೆಯನ್ನು ಶರಣ ಪರಂಪರೆ ಈ ರೂಪಕದಲ್ಲಿ ಕಟ್ಟಿಕೊಟ್ಟಿತು:

"ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ,

ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯ.

ಕಲ್ಯಾಣ ಎಂಬುದು ಪ್ರಣತಿಯಾಗಿತ್ತು,

ನಾನು ತೈಲವಾದೆನು, ನೀವು ಬತ್ತಿಯಾದಿರಿ, ಪ್ರಭುದೇವರು ಜ್ಯೋತಿಯಾದರು.

ಪ್ರಣತಿ ಒಡೆದಿತ್ತು, ತೈಲ ಚೆಲ್ಲಿತ್ತು,

ಬತ್ತಿ ಬಿದ್ದಿತಯ್ಯ, ಜ್ಯೋತಿ ನಂದಿತಯ್ಯ,

ನಮ್ಮ ಕೂಡಲಸಂಗಮ ಶರಣರ ಮನ ನಂದಿತಯ್ಯ."

ಹಣತೆ ಒಡೆದು, ಶರಣರು ಚದುರಿ ಹೋದರೂ ಆ ಕರಸ್ಥಲದ ಪ್ರಜ್ಞೆ ಅಳಿಯಲಿಲ್ಲ. ಅದರ ಎರಡನೆಯ ಮಹತ್ತರ ಮೈಲಿಗಲ್ಲೇ ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ. ಕರಸ್ಥಲಕ್ಕೆ ಬಂದ ಲಿಂಗ ಹೇಗೆ ಕ್ಷೇತ್ರಾಧಿಪತಿಯ ಏಕಸ್ವಾಮ್ಯವನ್ನು ಮುರಿದಿತ್ತೋ, ಹಾಗೆಯೇ ಸಂವಿಧಾನವು ರಾಜಕೀಯ ಶಕ್ತಿಯನ್ನು ಪ್ರತಿಯೊಬ್ಬ ನಾಗರಿಕನ ಕೈಬೆರಳಿನ ಮತವನ್ನಾಗಿಸಿತು. ಸಂವಿಧಾನ ರಚನಾ ಸಭೆಯ ಕೊನೆಯ ಭಾಷಣದಲ್ಲಿ (25 ನವೆಂಬರ್ 1949) ಬಾಬಾಸಾಹೇಬರು ಎಚ್ಚರಿಸಿದ ಮಾತು ಇಂದಿಗೂ ಪ್ರಸ್ತುತ:

"1950ರ ಜನವರಿ 26ರಂದು ನಾವು ವೈರುಧ್ಯಗಳ ಜೀವನಕ್ಕೆ ಕಾಲಿಡುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಹೊಂದಲಿದ್ದೇವೆ, ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸಮಾನತೆ ಮುಂದುವರಿಯಲಿದೆ. ರಾಜಕೀಯದಲ್ಲಿ 'ಒಬ್ಬ ವ್ಯಕ್ತಿ, ಒಂದು ಮತ ಮತ್ತು ಒಂದು ಮತ, ಒಂದು ಮೌಲ್ಯ' ಎಂಬ ತತ್ವವನ್ನು ನಾವು ಗುರುತಿಸುತ್ತೇವೆ. ಆದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ರಚನೆಯ ಕಾರಣದಿಂದಾಗಿ, ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ 'ಒಬ್ಬ ವ್ಯಕ್ತಿ, ಒಂದು ಮೌಲ್ಯ' ಎಂಬ ತತ್ವವನ್ನು ನಾವು ನಿರಾಕರಿಸುತ್ತಲೇ ಇರುತ್ತೇವೆ. ಈ ವೈರುಧ್ಯದ ಬದುಕನ್ನು ನಾವು ಇನ್ನೆಷ್ಟು ಕಾಲ ಮುಂದುವರಿಸಬೇಕು? ಎಷ್ಟು ಕಾಲ ನಾವು ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಸಮಾನತೆಯನ್ನು ನಿರಾಕರಿಸುತ್ತಲೇ ಇರಲಿದ್ದೇವೆ? ಹೀಗೆಯೇ ನಿರಾಕರಿಸುತ್ತಾ ಹೋದರೆ, ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನೇ ನಾವು ಅಪಾಯಕ್ಕೆ ತಳ್ಳುತ್ತೇವೆ."

ಅಂಬೇಡ್ಕರ್ ಅವರ ಈ ಮಾತಿನ ತಿರುಳು ಸ್ಪಷ್ಟ: ಮತದಾನದ ಹಕ್ಕು ಕೇವಲ ಸರ್ಕಾರವನ್ನು ಆರಿಸುವ ಪ್ರಕ್ರಿಯೆಯಲ್ಲ, ಅದು ಶತಮಾನಗಳಿಂದ ಅಂಚಿಗೆ ತಳ್ಳಲ್ಪಟ್ಟ ಶೋಷಿತ ಕಾಯಕಜೀವಿಗೆ ಸಮಾಜದ ಶಕ್ತಿ ಕೇಂದ್ರಗಳನ್ನು ಪ್ರಶ್ನಿಸುವ, ತನ್ನ ಅಸ್ಮಿತೆಯನ್ನು ರಕ್ಷಿಸಿಕೊಳ್ಳುವ ರಕ್ಷಣಾ ಕವಚ.

ಆದರೆ ಇಂದು 21ನೇ ಶತಮಾನದಲ್ಲೂ ಸ್ಥಾವರ ಮನಸ್ಥಿತಿ ಹೊಸ ರೂಪದಲ್ಲಿ ಸಂಚು ಹೂಡುತ್ತಿದೆ. ಅಂದು ಕಲ್ಯಾಣದಿಂದ ಶರಣರನ್ನು ಒಕ್ಕಲೆಬ್ಬಿಸಿ ಊರು ಖಾಲಿ ಮಾಡಿಸಿದಂತೆ, ಇಂದು ಪ್ರಜಾಪ್ರಭುತ್ವದಲ್ಲಿ ಬಡವರು, ಅಲೆಮಾರಿಗಳು ಮತ್ತು ಅಂಚಿನ ಸಮುದಾಯಗಳ ಮತಗಳನ್ನು ವ್ಯವಸ್ಥಿತವಾಗಿ 'ವೋಟರ್ಸ್ ಡಿಲೀಶನ್' (ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹಾಕುವುದು) ಮಾಡುವ ಮೂಲಕ ಅವರನ್ನು ರಾಜಕೀಯ ಅಸ್ತಿತ್ವದಿಂದಲೇ ಹೊರದಬ್ಬಲಾಗುತ್ತಿದೆ. ಮತದ ಹಕ್ಕನ್ನು ಕಸಿದುಕೊಳ್ಳುವುದೆಂದರೆ, ಮತ್ತೆ ಅವರನ್ನು ನಗರ-ಹಳ್ಳಿಗಳ ಪರಿಧಿಯಾಚೆಗಿನ ನಿಶ್ಯಬ್ದ ಅಸಹಾಯಕತೆಗೆ ತಳ್ಳುವುದು ಎಂದೇ ಅರ್ಥ.

ದೇವಸ್ಥಾನದ ಕ್ಷೇತ್ರಾಧಿಪತಿಯ ಹಿಡಿತದಲ್ಲಿದ್ದ ದೈವತ್ವ ಕರಸ್ಥಲಕ್ಕೆ ಬಂದು ಕುಳಿತದ್ದು ಮತ್ತು ರಾಜ್ಯಾಧಿಕಾರವು ಕೈಬೆರಳಿನ ತುದಿಯ ಮಸಿಯ ಗುರುತಾಗಿ ಬಂದು ನಿಂತದ್ದು-ಇವೆರಡೂ ಜಗತ್ತಿನ ಯಾವುದೇ ಪ್ರಜಾಸತ್ತಾತ್ಮಕ ಮೌಲ್ಯಗಳಿಗಿಂತ ಮಿಗಿಲಾಗಿ ಮನುಕುಲದ ಘನತೆಯನ್ನು ಎತ್ತಿಹಿಡಿದ ಕ್ರಾಂತಿಗಳು. ಕಲ್ಯಾಣದ ಹಣತೆ ಒಡೆದರೂ ಬೆಳಕಿನ ಹಂಬಲ ಸಾಯಲಿಲ್ಲ; ಅದೇ ರೀತಿ ಇಂದಿನ ಡಿಜಿಟಲ್ ಯುಗದ ಸ್ಥಾವರ ಹುನ್ನಾರಗಳ ನಡುವೆಯೂ ಆ ಬೆರಳಿನ ಮತದ ಘನತೆಯನ್ನು ಕಾಪಾಡಿಕೊಳ್ಳುವುದು ಇಂದಿನ ಪ್ರಜ್ಞಾವಂತ ಸಮಾಜದ ತುರ್ತು ಕಾಯಕವಾಗಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST