ಪ್ರಜಾಸ್ತ್ರ ಸುದ್ದಿ
ರಾಯಗಢ(Raigad): ಪೋಳಾದಪುರ್-ಮಹಾಬಲೇಶ್ವರ ರಸ್ತೆಯ ಅಂಬೇನಾಳಿ ಘಾಟ್ ಹತ್ತಿರ ಎಸ್ ಯುವಿ ಕಾರೊಂದು ಪ್ರಪಾತಕ್ಕೆ ಬಿದ್ದಿದ್ದು, 8 ಯುವಕರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಈ ದುರಂತ ನಡೆದಿದೆ. ಮೃತರು ರತ್ನಗಿರಿ ಹಾಗೂ ಸತಾರ ಮೂಲದವರೆಂದು ತಿಳಿದು ಬಂದಿದೆ.
ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರು ಪ್ರಪಾತಕ್ಕೆ ಬಿದ್ದಿದೆ. ಈ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಸಹ ಸಿಗುವುದಿಲ್ಲ. ಹೀಗಾಗಿ ತುರ್ತು ಸಹಾಯವಾಣಿಗೂ ಕರೆ ಮಾಡಲು ಆಗಿಲ್ಲ. ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಕಾರ್ಯಾಚರಣೆ ನಡೆಸಿದಾಗ ಅಪಘಾತವಾಗಿರುವುದು ತಿಳಿದು ಬಂದಿದೆ.
ಅಂಶ್ ಚವಾಣ, ಆದಿತ್ಯ ಸಾಳುಂಖೆ, ಮಹೇಶ ಪವಾರ, ರಾಜೇಶ ಕಾಟ್ಕರ, ಉತ್ಕರ್ಷ ಶಿಂಗ್ಟೆ, ನಿಖಿಲ್ ಶಿಂಗ್ಟೆ, ರಿತೇಶ ಲೋಖಂಡೆ, ಸುಹಾಸ್ ಲೋಖಂಡೆ ಮೃತ ಯುವಕರು ಎಂದು ತಿಳಿದು ಬಂದಿದೆ. ಎಲ್ಲ ಯುವಕರು 25ರ ಆಸುಪಾಸಿನಲ್ಲಿದ್ದಾರೆ. ಇವರೆಲ್ಲ ರತ್ನಾಗಿರಿಯ ಕಡಲತೀರ ದಾಪೋಲಿಗೆ ಪ್ರವಾಸಕ್ಕೆ ಹೋಗಿದ್ದರು. ವಾಪಸ್ ಸತಾರಗೆ ಬರುವಾಗಿ ಈ ದುರಂತ ಸಂಭವಿಸಿದೆ.



