ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಮಾದಾಪಟ್ಟಣದಲ್ಲಿರುವ ಕಾವೇರಿ ಜಲ್ಲಿ ಕ್ರಷರ್ ನಲ್ಲಿ ಬಂಡೆ ಕುಸಿತದಿಂದಾಗಿ 7 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಅಲ್ಲದೆ ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ದಿನಗೂಲಿ ಕೆಲಸಗಾರರಾಗಿದ್ದು, ಕ್ರಷರ್ ಹತ್ತಿರ ವಾಸ ಮಾಡುತ್ತಿದ್ದರಂತೆ. ಗುರುವಾರ ಮುಂಜಾನೆ 7.30ರ ಸುಮಾರಿಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಸ್ಥಳಕ್ಕೆ ಪೊಲೀಸರು, ರಕ್ಷಣಾ ತಂಡ ಬಂದಿದ್ದು ಕಾರ್ಯಾಚರಣೆ ನಡೆಸಿದೆ. ಬಂಡೆಯ ಕೆಳಗೆ ಇನ್ನು ಕೆಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನಂದಸ್ವಾಮಿ ಎಂಬುವವರಿಗೆ ಈ ಕ್ರಷರ್ ಸೇರಿದ್ದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.



