ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 26ರಂದು ನಂದಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕರು ಕಾರ್ಖಾನೆಗೆ 1 ಕೋಟಿ 87 ಲಕ್ಷ ರೂಪಾಯಿಗೂ ಹೆಚ್ಚಿನ ವಂಚನೆ ನಡೆದಿದೆ ಎಂದು ದೂರು ದಾಖಲಿಸಿದ್ದರು. 2025-26ರ ಕಬ್ಬು ನುರಿಸುವ ಹಂಗಾಮಿನಲ್ಲಿ ಸುಮಾರು 17 ಸಾವಿರ ಮೆಟ್ರಿಕ್ ಟನ್ ಕಬ್ಬಿನ ನಕಲಿ ಬಿಲ್ ತಯಾರಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ದೂರು ದಾಖಲಾಗಿರುತ್ತೆ. ಪೊಲೀಸರು ಇದರ ತನಿಖೆ ಶುರು ಮಾಡಿದ ಮೇಲೆ ಗೊತ್ತಾಗಿದ್ದು, ಈಗ ಬಂಧಿತರಾಗಿರುವ 8 ಆರೋಪಿಗಳು ಬರೋಬ್ಬರಿ 12 ಕೋಟಿ 37 ಲಕ್ಷಕ್ಕೂ ಹೆಚ್ಚಿನ ಹಣವನ್ನು ಕಳೆದ ಐದಾರು ವರ್ಷಗಳಿಂದ ವಂಚನೆ ಮಾಡಿಕೊಂಡು ಬಂದಿರುವುದು ತಿಳಿದು ಬಂಧಿದೆ.
ನಂದಿ ಸಕ್ಕರೆ ಕಾರ್ಖಾನೆಯಲ್ಲಿ ತೂಕ ನೋಡುವ ಹಾಗೂ ಬಿಲ್ ಜನರೇಟ್ ಮಾಡುವ ಕೆಲಸ ಮಾಡುತ್ತಿದ್ದ ಪ್ರಮುಖ ಆರೋಪಿ ಧರೆಪ್ಪ ನಾವಿ, ಈ ಹಿಂದೆ ಇಲ್ಲಿ ಕೆಲಸ ಮಾಡುತ್ತಿದ್ದ ಬೀರಪ್ಪ ಗಡೇದರ ಅನ್ನೊ 2ನೇ ಆರೋಪಿ ಇವರಿಬ್ಬರು ಕೂಡಿಕೊಂಡು ವಂಚನೆಯ ಸಂಚು ರೂಪಿಸಿ ಕೆಲ ಚೀಟ್ ಬಾಯ್ ಗಳ ಮೂಲಕ 2020 ರಿಂದ 2026ರ ತನಕ ನಕಲಿ ಬಿಲ್ ಜನರೇಟ್ ಮಾಡಿ ಕಬ್ಬು ಬೆಳೆಯದವರ ಹೆಸರಲ್ಲಿರುವ 93 ಜನರ ಖಾತೆಗಳಿಗೆ 12 ಕೋಟಿ 37 ಲಕ್ಷಕ್ಕೂ ಹೆಚ್ಚಿನ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಈಗ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು 11 ಕೋಟಿ 32 ಲಕ್ಷಕ್ಕೂ ಹೆಚ್ಚಿನ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಧರೆಪ್ಪ ನಾವಿ, ಬೀರಪ್ಪ ಗಡೇದರ, ಯಲ್ಲಪ್ಪ ಗಡೇದರ, ಪ್ರಕಾಶ ಗಡ್ಡಿ, ಪರಮಾನಂದ ಗಡ್ಡಿ, ಮಹಾದೇವ ಕಾಂಬಳೆ, ಬಾಳಪ್ಪ ಜೋಪಡೆ, ಪ್ರಭಾಕರ ಸಿಂಗೆ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಈ ಹಿಂದೆ ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿಯೂ ವಂಚನೆ ಮಾಡಿರುವುದು ಕಂಡು ಬಂದಿದೆ. ಕೆಲವರ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.



