ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಮುಂಜಾನೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿನ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡಿದೆ. ಆಸ್ಪತ್ರೆಯ 2ನೇ ಮಹಡಿಯಲ್ಲಿರುವ ಕಣ್ಣು, ಕಿವಿ, ಮೂಗು, ಕೀಲು ಮೂಳೆಯ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಮುಂಜಾನೆ 8.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ. 9 ಗಂಟೆಗೆ ಸೇವೆ ಆರಂಭವಾಗುವ ಕಾರಣ ರೋಗಿಗಳು ಹೊರಗೆ ನಿಂತಿದ್ದರು. ಅದೃಷ್ಟವಶಾತ್ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಅಪಾಯದಿಂ ಪಾರಾಗಿದ್ದಾರೆ.
ವೈದ್ಯಕೀಯ ಸಿಬ್ಬಂದಿ ಶಸ್ತ್ರಚಿಕಿತ್ಸೆಗೆ ಮುಂಜಾನೆ 8 ಗಂಟೆಗೆ ತಯಾರಿ ನಡೆಸಿದ್ದರು. ಈ ವೇಳೆ ಆಕ್ಸಿಜನ್ ಸಿಲಿಂಡರ್ ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ವೈದ್ಯರು ಹಾಗೂ ಸಿಬ್ಬಂದಿ ತಕ್ಷಣ ಹೊರಗೆ ಬಂದಿದ್ದಾರೆ. ನಂತರ ಸ್ಫೋಟವಾಗಿದೆ. ಅಂದಾಜು 75 ಲಕ್ಷ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಸುಟ್ಟು ಹೋಗಿವೆ. ಅಲ್ಲದೆ ಅನಸ್ತೇಶಿಯಾ ವಿಭಾಗದ ಯಂತ್ರಗಳು ಸಹ ಹಾನಿಯಾಗಿವೆ.



