ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ರಾಷ್ಟ್ರೀಯ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಸೋಮವಾರ ಸಿಜೆಪಿ ಪಕ್ಷದಿಂದ ಸಂಸತ್ ಭವನ ಚಲೋ ನಡೆಸಿತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಈ ವೇಳೆ ಹೋರಾಟಗಾರರ ಮೇಲೆ ಆರ್ ಪಿಎಫ್ ಲಾಠಿ ಚಾರ್ಜ್ ಮಾಡಿದೆ. ಸಂಸತ್ ಭವನದ ಸುತ್ತಮುತ್ತ ಬಿಎನ್ ಎಸ್ ಕಾಯ್ದೆ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ಭದ್ರತೆಯ ಕಾರಣದಿಂದ ದೆಹಲಿ ಮೆಟ್ರೋ ರೈಲು ನಿಗಮವು ಜನಪಥ್, ಸೆಂಟ್ರಲ್ ಸೆಕ್ರೆಟರಿಯೇಟ್, ರಾಜೀವ್ ಚೌಕ್, ಪಟೇಲ್ ಚೌಕ್ ಸೇರಿದಂತೆ ಐದು ಕಡೆ ನಿಲ್ದಾಣಗಳನ್ನು ಬಂದ್ ಮಾಡಿದೆ. ಜಂತರ್ ಮಂತರ್ ಬಳಿ ಕಲ್ಲು ತುಂಬಿದ ಲಾರಿಯನ್ನು ತಂದು ನಿಲ್ಲಿಸಲಾಗಿದೆ ಎಂದು ಸಿಜೆಪಿ ಆರೋಪಿಸಿದೆ. ಇದರ ಸಂಸ್ಥಾಪಕ ಅಭಿಜಿತ್ ದಿಪ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ನೇತೃತ್ವದಲ್ಲಿ ಮೆರವಣಿಗೆ ನಡೆಸಬೇಕಾಗಿತ್ತು. ಆದರೆ, ಎರಡು ದಿನಗಳಿಂದ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸ್ಥಳದಲ್ಲಿಯೇ ಚಿಕಿತ್ಸೆ ನೀಡುವ ಬದಲು ಪೊಲೀಸರು ಬಲವಂತದಿಂದ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಯುವ ಜನತೆ ಅವರ ಅನುಪಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.



