ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಈ ವರ್ಷ ನಡೆದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಂಗಾಳದಲ್ಲಿಯೇ ಅತೀ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಚುನಾವಣಾ ಆಯೋಗಕ್ಕೆ ನೀಡಿದ ದಾಖಲೆಗಳ ಪ್ರಕಾರ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ ಚುನಾವಣೆಗಾಗಿ ಬಿಜೆಪಿ 529.38 ಕೋಟಿ ಖರ್ಚು ಮಾಡಿದೆ. ಇದರಲ್ಲಿ ಪಶ್ಚಿಮ ಬಂಗಾಳದಲ್ಲಿ 286.99 ಕೋಟಿ ರೂಪಾಯಿ ಖರ್ಚು ಮಾಡಿದೆ.
ಈ ಐದು ರಾಜ್ಯಗಳ ಚುನಾವಣೆಗಾಗಿ ಕಾಂಗ್ರೆಸ್ 248.55 ಕೋಟಿ ರೂಪಾಯಿ ಖರ್ಚು ಮಾಡಿದೆ. ಆದರೆ, ಬಿಜೆಪಿ ಬಂಗಾಳ ರಾಜ್ಯವೊಂದಕ್ಕೆ ಇದಕ್ಕಿಂತ ಹೆಚ್ಚು ಖರ್ಚು ಮಾಡಿದೆ. ಬಂಗಾಳದಲ್ಲಿ ಕಾಂಗ್ರೆಸ್ 42.08 ಕೋಟಿ ರೂಪಾಯಿ ಖರ್ಚು ಮಾಡಿದೆ. ಟಿಎಂಸಿ ಇನ್ನು ಚುನಾವಣೆ ವೆಚ್ಚ ಬಹಿರಂಗಪಡಿಸಿಲ್ಲ. ಕೇರಳದಲ್ಲಿ ಕಾಂಗ್ರೆಸ್ 105.34 ಕೋಟಿ, ಬಿಜೆಪಿ 82.67, ಸಿಪಿಐ(ಎಂ) 28.60 ಕೋಟಿ ಖರ್ಚು ಮಾಡಿದೆ.
ಚುನಾವಣೆ ಅವಧಿಯಲ್ಲಿ ಬಿಜೆಪಿಗೆ ಬರೋಬ್ಬರಿ 1,472.8 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಕಾಂಗ್ರೆಸ್ ಗೆ 207.17 ಕೋಟಿ ದೇಣಿಗೆ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬಳಿ 6,722.6 ಕೋಟಿ ರೂಪಾಯಿ ಇದ್ದಿದ್ದು ಚುನಾವಣೆ ಮುಗಿಯುವ ವೇಳೆಗೆ 7,627.2 ಕೋಟಿಯಾಗಿದೆ. ಆದರೆ, ಕಾಂಗ್ರೆಸ್ ಬಳಿಯಿದ್ದ 169.06 ಕೋಟಿಯಿಂದ 103.2 ಕೋಟಿಗೆ ಇಳಿಕೆಯಾಗಿದೆ.


