ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಅಕ್ಕಿ ಮಾಫಿಯಾ ಕುರಿತು ವರದಿ ಮಾಡಿದ ಹೊಸ ದಿಗಂತ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರರಾದ ಪರಶುರಾಮ ಶಿವಶರಣ ಅವರ ಮನೆಗೆ ಹೋಗಿ ಜೀವ ಬೆದರಿಕೆ ಹಾಕಲಾಗಿದೆ. ಈ ಘಟನೆಯನ್ನು ಸಿಂದಗಿ ತಾಲೂಕಿನ ಪತ್ರಕರ್ತರು ಖಂಡಿಸಿದ್ದಾರೆ. ಅಕ್ರಮ, ಭ್ರಷ್ಟಾಚಾರದ ಕುರಿತು ವರದಿ ಮಾಡುವುದು ವೃತ್ತಿಪರ ಕರ್ತವ್ಯವಾಗಿದೆ. ಆದರೆ, ಪತ್ರಕರ್ತರಿಗೆ ಜೀವ ಬೆದರಿಕೆ ಹಾಕುವುದು, ಅವರ ಮೇಲೆ ಹಲ್ಲೆ ಮಾಡುವುದು ಖಂಡನೀಯ. ಇದು ಪತ್ರಿಕಾ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಕಾನಿಪ ಸಂಘದ ತಾಲೂಕಾಧ್ಯಕ್ಷ ಮಾಂತೇಶ ನೂಲಾನವರ ಹೇಳಿದರು.
ಈಗಾಗ್ಲೇ ಬಂಧಿಸಿರುವ ಇಬ್ಬರು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಪತ್ರಕರ್ತರು ಯಾವುದೇ ಭಯ, ಬೆದರಿಕೆ, ಒತ್ತಡವಿಲ್ಲದೆ ಕೆಲಸ ಮಾಡುವಂತಾಗಬೇಕು. ಹೀಗಾಗಿ ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರ ಮೂಲಕ ಗೃಹ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕಾನಿಪ ಸಂಘದ ಉಪಾಧ್ಯಕ್ಷ ಅಂಬರೀಶ ಸುಣಗಾರ, ಹಿರಿಯ ಪತ್ರಕರ್ತರಾದ ರವಿಚಂದ್ರ ಮಲ್ಲೇದ, ಸುದರ್ಶನ ಜಂಗಣ್ಣಿ, ನಾಗೇಶ ತಳವಾರ, ಜಾಹಿರ್ ಮುಲ್ಲಾ, ಗುರು ಮಠ, ಖಾಜಾಅಮೀನ್ ಮಕಾಂದಾರ ಉಪಸ್ಥಿತರಿದ್ದರು.



