ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ವಿಕಾಸಶೀಲ ಹಾಗೂ ಸೌಹಾರ್ದಶೀಲ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್ ಗಳಲ್ಲಿ ಭಾರತ್ ಜೋಡೋ ಯುವ ಸಂಘಗಳ ರಚನೆಗೆ ಮುಂದಾಗಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ನಡೆದ ಭಾರತ್ ಜೋಡೋ ಯುವ ಸಂಘಗಳ ರಚನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳು ಹಾಗೂ ನಗರ ವಾರ್ಡ್ ಗಳಲ್ಲಿ ಯುವಕರನ್ನು ಸಂಘಟಿಸುವ ಮೂಲಕ ನಾಯಕತ್ವದ ಗುಣಗಳು, ಸಾಮಾಜಿಕ ಹೊಣೆಗಾರಿಕೆ ಹಾಗೂ ಜವಾಬ್ದಾರಿಯುತ ನಾಗರಿಕ ಪ್ರಜ್ಞೆಯನ್ನು ಬೆಳೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಸ್ಥಳೀಯ ಸಮುದಾಯದ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕ್ರೀಡೆ, ಫಿಟ್‌ನೆಸ್, ಆರೋಗ್ಯಕರ ಜೀವನಶೈಲಿ ಹಾಗೂ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳಲ್ಲಿ ಯುವಕರನ್ನು ನೇರ ಪಾಲುದಾರರನ್ನಾಗಿ ಮಾಡುವ ಮೂಲಕ ಅವರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ರಾಜ್ಯಾದ್ಯಂತ ಸುಮಾರು 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಿ, 50 ಲಕ್ಷಕ್ಕೂ ಹೆಚ್ಚು ಯುವಕರನ್ನು ಈ ವೇದಿಕೆಯಲ್ಲಿ ಒಗ್ಗೂಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶಗಳ ಜನಸಂಖ್ಯೆಗೆ ಅನುಗುಣವಾಗಿ ಸಂಘಗಳನ್ನು ರಚಿಸಲು ಕ್ರಮವಹಿಸಿ, ನಗರ ಪ್ರದೇಶಗಳಲ್ಲಿ ಮತಗಟ್ಟೆಗಳನ್ನು ಘಟಕವಾಗಿ ಪರಿಗಣಿಸಿ ಸಂಘಗಳ ವ್ಯಾಪ್ತಿಯನ್ನು ನಿರ್ಧರಿಸಲಾಗುವುದು.
ತಳಮಟ್ಟದಲ್ಲಿ ಯುವಕರಿಗೆ ವ್ಯವಸ್ಥಿತ ವೇದಿಕೆಗಳ ಕೊರತೆ ಕಂಡುಬರುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವಕರಿಗೆ ನಾಯಕತ್ವ, ಕ್ರೀಡೆ, ಆರೋಗ್ಯ, ಫಿಟ್‌ನೆಸ್ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಸಂಘಗಳು ಪ್ರಮುಖ ಪಾತ್ರವಹಿಸಲಿವೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್ನಲ್ಲಿ ಸಂಘಟಿತ ವೇದಿಕೆ ನಿರ್ಮಿಸುವ ಮೂಲಕ ಜವಾಬ್ದಾರಿಯುತ ಹಾಗೂ ಸಕ್ರಿಯ ನಾಗರಿಕರನ್ನು ರೂಪಿಸುವ ಉದ್ದೇಶಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿ ಎಂದರು.



