ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಉದ್ಯೋಗ ಖಾತ್ರಿಯ ಕೆಲಸ ಸಿಗುತ್ತಿಲ್ಲವೆಂದು ಹೊನ್ನಳ್ಳಿ ಗ್ರಾಮ ಪಂಚಾಯ್ತಿಯ ವಿರುದ್ಧ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದಿದ್ದಾರೆ. ಸುಮಾರು ಎರಡ್ಮೂರು ತಿಂಗಳಿನಿಂದ ಜನರಿಗೆ ಬರೀ ಅಲೆದಾಡಿಸುತ್ತಿದ್ದು, ಜಾಬ್ ಕಾರ್ಡ್ ಮಾಡಿಸುತ್ತಿಲ್ಲ. ಕೆಲಸ ಕೊಡುತ್ತಿಲ್ಲವೆಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಬರಗಾಲ ಬಿದ್ದಿದೆ. ಹೊಲಗಳಲ್ಲಿ ಕೆಲಸ ಇಲ್ಲ. ಜನರು ಸಾಕಷ್ಟು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಹೊನ್ನಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಒ ಶಹಾಪೂರ ಹಾಗೂ ಕಂಪ್ಯೂಟರ್ ಆಪರೇಟರ್ ಅಂಬರೀಶ ಎಂಬುವರು ಸರಿಯಾಗಿ ಪಂಚಾಯ್ತಿಗೆ ಬರದೆ ತಮಗೆ ಉದ್ಯೋಗ ಖಾತ್ರಿಯ ಪ್ರಯೋಜನ ನೀಡುತ್ತಿಲ್ಲವೆಂದು ಹೇಳಿ ಸೋಮವಾರ ಮುಂಜಾನೆ 8 ಗಂಟೆಯಿಂದ ಸಂಜೆ 5 ಗಂಟೆಯ ತನಕ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಪಿಡಿಒ ಶಹಾಪೂರ ಅವರಿಗೆ ಮೂರ್ನಾಲ್ಕು ಪಂಚಾಯ್ತಿಯ ಉಸ್ತುವಾರಿ ಇದೆಯಂತೆ. ಹೀಗಾಗಿ ಅವರು ಹೊನ್ನಳ್ಳಿ ಪಂಚಾಯ್ತಿ ಕಡೆ ಬರುವುದೇ ಇಲ್ಲ. ಕಂಪ್ಯೂಟರ್ ಆಪರೇಟರ್ ಅಂಬರೀಶ ಸಹ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಹೊರಗಿಂದಲೇ ಕೆಲಸ ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸಮಸ್ಯೆ ಕುರಿತು ಕೂಡಲೇ ತಾಲೂಕು ಪಂಚಾಯ್ತಿ ಪ್ರಭಾರ ಇಒ ಅನಿಲ ಹಳ್ಳಿ ಅವರು ಗಮನ ಹರಿಸಿ ಗ್ರಾಮಸ್ಥರಿಗೆ ನ್ಯಾಯ ಕೊಡಿಸಬೇಕಿದೆ. ಕುಂಟು ನೆಪ ಹೇಳಿ ಜನರಿಗೆ ತೊಂದರೆ ಕೊಡುತ್ತಿರುವ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ತಾಲೂಕು ಪಂಚಾಯ್ತಿ ಮುಂದೆಯೇ ಬಂದು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


