LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುತ್ತೆ: ಯತ್ನಾಳ್

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದ ಬಳಿಕ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಗುರುವಾರ ಮತ್ತೊಂದು ಪೋಸ್ಟ್ ಮಾಡುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ತಮ್ಮ ಉಚ್ಛಾಟನೆಗೆ ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಬರಹವೊಂದನ್ನು ಪೋಸ್ಟ್ ಮಾಡುವ ಮೂಲಕ ಕಿಡಿ ಕಾರಿದ್ದು, ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ ಎಂದು ಮತ್ತೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

ಕೆಲ ರಾಜಕೀಯ ಪಟ್ಟಭದ್ರರು, ಅಡ್ಜಸ್ಟ್ಮೆಂಟ್ ರಾಜಕಾರಣದ ಹರಿಕಾರರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲಬುರ್ಗಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈಕಮಾಂಡ್ ಮಾಡದೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನಿಗೆ ಕಾರಣವಾಗಿದೆ. ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ.

ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿ ಹಾಗೂ ಆಡಳಿತರೂಢ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರ ಉಚ್ಛಾಟನೆ ಮಾಡದೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಟೊಂಕಕಟ್ಟಿ ಕೆಲಸ ಮಾಡಿದ ನನ್ನಂತವರಿಗೆ ಉಚ್ಛಾಟನೆ ಮಾಡುವುದು ಪಕ್ಷದ ದ್ವಂದ್ವ ನೀತಿಗಳಿಗೆ ಹಿಡಿದ ಕೈಗನ್ನಡಿ. ಕಲ್ಯಾಣ ಕರ್ನಾಟಕದಲ್ಲಿ ಸಧೃಡವಾಗಿದ್ದ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದು ಯಾರ ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ಎಂದು ಪಕ್ಷದ ಪ್ರಮುಖರು ವಿಶ್ಲೇಷಿಸಲಿ.

ಬಿ.ಬಿ ಶಿವಪ್ಪ, ಮಲ್ಲಿಕಾರ್ಜುನಪ್ಪ, ಡಾ.ವಿ.ಎಸ್ ಆಚಾರ್ಯರು ಸೇರಿದಂತೆ ಪಕ್ಷದ ಅನೇಕರ ಧುರೀಣರು, ಸಾವಿರಾರು ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿದ ಪರಿಣಾಮದಿಂದಲೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದ್ದು. ಬಿಡಿಗಾಸಿಲ್ಲದೇ, ಕಾರ್ಯಕರ್ತರ ಓಡಾಟ, ಉಪಹಾರಕ್ಕೂ ಹಣವಿಲ್ಲದಿರುವ ಕಾಲಘಟ್ಟದಲ್ಲಿ ದಿವಂಗತ ಮಲ್ಲಿಕಾರ್ಜುನಪ್ಪನವರು ತಮ್ಮ ಸ್ವಂತ ಸಂಪನ್ಮೂಲದಿಂದ ಪಕ್ಷವನ್ನು ಮುನ್ನಡೆಸಿ ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸಿ ಸಂಘಟನೆಗೆ ಕಾರಣವಾದರು. ಮಾತು ಕಡೆಮೆಯಾದರೂ ತಮ್ಮ ಕೆಲಸದಿಂದ ಕರಾವಳಿಯಲ್ಲಿ ಪಕ್ಷವನ್ನು ಸಂಘಟಿಸಿದ್ದು ಬಿ.ಎಸ್ ಆಚಾರ್ಯರು. ಆಯಕಟ್ಟಿನ ಸ್ಥಾನದಲ್ಲಿದ್ದರೂ ಆಚಾರ್ಯರ ಕುಟುಂಬದವರು ಯಾರೂ ಸಹ ರಾಜಕಾರಣಕ್ಕೆ ಬರಲಿಲ್ಲ ಎಂಬುದು ಹಲವರಿಗೆ ಗೊತ್ತಿಲ್ಲ.

ಹಿಂದುತ್ವವಾದ ಬಗ್ಗೆ ರಾಜಿ ಮಾಡಿಕೊಳ್ಳದೆ, ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಜ್ಯದಲ್ಲಿ ಪಕ್ಷದ ಕಟ್ಟಿದ ಈಶ್ವರಪ್ಪನವರನ್ನು ಹೊರಗಿಟ್ಟರು. ನಿಸ್ವಾರ್ಥ ಕಾರ್ಯಕರ್ತರು, ತನು-ಮನ-ಧನದಿಂದ ದುಡಿದ ಮುಖಂಡರಿಂದ ಪಕ್ಷ ಸಂಘಟನೆಯಾಯಿತೇ ಹೊರತು ಸ್ವಯಂಘೋಷಿತ ‘ಪೂಜ್ಯ’ರಿಂದಲ್ಲ. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ವಕ್ಫ್ ಹೋರಾಟಕ್ಕೆ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದು ನಾವೇ, ವಾಲ್ಮೀಕಿ ಹಗರಣ, ದಲಿತರಿಗೆ ಎಸ್ ಸಿಎಸ್ ಪಿ, ಟಿಎಸ್ ಪಿ ಅನುದಾನದ ದುರ್ಬಳಕೆಯನ್ನು ಖಂಡಿಸಿದ್ದು, ಹೋರಾಟ ರೂಪಿಸಿದ್ದು, ವಕ್ಫ್ ವಿರುದ್ಧ ನಾವು ಮಾಡಿದ್ದ ಮಾಹಿತಿ ಸಂಗ್ರಕ್ಕೆ ಜೆ.ಪಿ.ಸಿ ಅಧ್ಯಕ್ಷರಾದ ಶ್ರೀ ಜಗದಂಬಿಕಾ ಪಾಲ್ ಅವರು ಪ್ರಶಂಸಿಸಿದ್ದರು.

ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಲತಾಯಿ ಧೋರಣೆಯನ್ನು, ಕೃಷ್ಣ ಯೋಜನೆಯ ವಿಳಂಬದ ಬಗ್ಗೆ ಧ್ವನಿ ಎತ್ತಿದ್ದು ನಾವೇ, ಕರ್ನಾಟಕ ಲೋಕಸೇವಾ ಆಯೋಗದಲ್ಲಿರುವ ಭ್ರಷ್ಟರನ್ನು ಕಿತ್ತೊಗೆಯಲು ಸ್ಪರ್ಧಾರ್ಥಿಗಳ ಜೊತೆಗೆ ನಿಂತಿದ್ದು ನಾವೇ. ಬಾಣಂತಿಯರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದು ನಾವೇ. ಪಕ್ಷದಲ್ಲಿ ಆಗಬೇಕಾದ ಕೆಲ ಬದಲಾವಣೆಗಳು, ಸುಧಾರಣೆಗಳು ಸೂಚಿಸಿದ್ದಕ್ಕೆ ನಮ್ಮ ನಿಲುವು ಕೆಲವರಿಗೆ ‘ಅಪಥ್ಯ’ವಾಗಿದೆ. ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ. ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ. ನಿಜವಾದ ಜನಪರ ಕಾಳಜಿ ಇರುವ ನಾಯಕರಿಗೆ ಪಕ್ಷ ಅವಕಾಶ ನೀಡಬೇಕು. ಕಾಟಾಚಾರಕ್ಕೆ ಸರ್ಕಾರದ ನೀತಿಗಳನ್ನು ಖಂಡಿಸಿ ಸಂಜೆ ವೇಳೆ ಅವರ ಮನೆಯಲ್ಲಿ ಭೂಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯ ಪಕ್ಷಕ್ಕಿಲ್ಲ. Nation First, Party next, Self last ಎಂಬ ತತ್ವದಡಿ ಕೆಲಸ ಮಾಡುವ ನನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇಷ್ಟೊಂದು ಸುದೀರ್ಘವಾದ ಬರಹವನ್ನು ಪೋಸ್ಟ್ ಮಾಡುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಮ್ಮ ಉಚ್ಛಾಟನೆಯನ್ನು ಖಂಡಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST