LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಸವ 'ಶಕ್ತಿ'ಯಲ್ಲ, ಬಸವ 'ಪ್ರಜ್ಞೆ' ಇಂದಿನ ತುರ್ತು

ವಿಶೇಷ ಲೇಖನ: ಬಸವ ಪಾಟೀಲ, ಲಂಡನ್

ಕರ್ನಾಟಕದ ಮಣ್ಣಿನಲ್ಲಿ ಇಂದು ಬಸವತತ್ವಕ್ಕೆ ಹೊಸದೊಂದು ಆಪತ್ತು ಎದುರಾಗಿದೆ. ಸಂಘ ಪರಿವಾರದ 'ಹಿಂದೂ ಸಮಾಜೋತ್ಸವ'ಗಳ ಹೆಸರಿನಲ್ಲಿ ಬಸವಣ್ಣನವರನ್ನು 'ಬಸವಶೈವ' (ಪುಸ್ತಕ) ಎಂದು ಕರೆದು, ಅವರ ಕ್ರಾಂತಿಕಾರಿ ವಿಚಾರಧಾರೆಗಳನ್ನು ವೈದಿಕ ಚೌಕಟ್ಟಿನೊಳಗೆ ಬಂಧಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಬಸವಣ್ಣನವರು ವಿರೋಧಿಸಿದ್ದೇ ಆಡಂಬರ, ಯಜ್ಞ-ಯಾಗಾದಿ ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನ. ಅಂತಹವರನ್ನು ಮತ್ತೆ ಅದೇ ಮಡಿವಂತಿಕೆಯ ಕಪಿಮುಷ್ಟಿಗೆ ತಳ್ಳುವುದು ಶರಣ ಸಂಕುಲಕ್ಕೆ ಮತ್ತು ಸಂವಿಧಾನದ ಆಶಯಕ್ಕೆ ಮಾಡುವ ಅಪಚಾರ.

1. ಶಕ್ತಿ ಪ್ರದರ್ಶನ ಮತ್ತು ಶರಣರ ಖಂಡನೆ

ಆಯುಧರೂಪಿ ವಸ್ತುಗಳು  ಹಿಡಿದ ಶೋಭಾಯಾತ್ರೆ ಅಥವಾ ವೈದಿಕ ಆಚರಣೆಗಳ ಮೂಲಕ ಬಸವಣ್ಣನವರನ್ನು ವೈಭವೀಕರಿಸುವುದು ಶರಣರ ತತ್ವಕ್ಕೆ ತದ್ವಿರುದ್ಧ. ಬಸವಣ್ಣನವರು 'ಅರಿವೇ ಗುರು' ಎಂದಿದ್ದರೇ ಹೊರತು, ಮೌಢ್ಯ ಆಚಾರಣೆಗಳನಲ್ಲ.

ಜೇಡರ ದಾಸಿಮಯ್ಯನವರ ವಚನ: "ಇಟ್ಟರೆ ಸಿರಿಯಪ್ಪದು, ಬಿಟ್ಟರೆ ಹಿರಿಯಪ್ಪದು, ಕೊಟ್ಟರೆ ಕುಲವಪ್ಪದು, ಅರಿತರೆ ದೇವನಪ್ಪದು ಕಾಣಾ ರಾಮನಾಥ." ಯಾರು ಅರಿವನ್ನು ಮರೆತು ಆಡಂಬರದ 'ಶೈವ' ಅಥವಾ 'ವೈದಿಕ' ಸಂಪ್ರದಾಯಗಳನ್ನು ಬಸವತತ್ವಕ್ಕೆ ಅಂಟಿಸಲು ನೋಡುತ್ತಾರೋ, ಅವರಿಗೆ ಈ ವಚನವೇ ಉತ್ತರ.

2. 'ಬಸವಶೈವ' ಅಲ್ಲ, “ಬಸವ ಪ್ರಜ್ಞೆ”

ಬಸವಣ್ಣನವರನ್ನು ವೈದಿಕ ಅವತಾರವನ್ನಾಗಿಸಿ ಅವರ ಸಾಮಾಜಿಕ ಕ್ರಾಂತಿಯ ಹರಿತವನ್ನು ಕುಂಠಿತಗೊಳಿಸುವ ಪ್ರಯತ್ನವಿದು. ಅನುಭವ ಮಂಟಪ ಎಂಬುದು ಕೇವಲ ಪುರಾಣ ಕಟ್ಟೆಯಲ್ಲ, ಅದು ದಮನಿತ ವರ್ಗಗಳ ಅನುಭಾವ ನುಡಿಗಳ ಸಂವಾದ ಮಂಟಪ (ಭೌತಿಕವಾಗಿದ್ದಿರಬಹುದು?) ಸಮಕಾಲೀನವಾಗಿ ಹೇಳಬೆಕೆಂದರೆ ಅದು ದಮನಿತರ ಸಂಸತ್ತಾಗಿತ್ತು.

ಬಸವಣ್ಣನವರ ವಚನ: "ಕಾಯಕದೊಳಗೆ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು." ಯಾರು ಕಾಯಕ ಮತ್ತು ದಾಸೋಹವನ್ನು ನಂಬುತ್ತಾರೋ ಅವರೇ ನಿಜವಾದ ಶರಣರು. ಅವರನ್ನು ಯಾವುದೋ 'ಬಸವಶೈವ' ಎಂಬ ಕಲ್ಪಿತ ಪಂಗಡದೊಳಗೆ ಸೀಮಿತಗೊಳಿಸುವುದು ಸಂವಿಧಾನ ವಿರೋಧಿ ಷಡ್ಯಂತ್ರ ಬಸವದ್ರೋಹಿತನ.

3. ಉತ್ಪಾದಕ/ಶ್ರಮಿಕ/ಹಿಂದುಳಿದ ವರ್ಗವೇ ಅನುಭವ ಮಂಟಪದ ನೈಜ ವಾರಸುದಾರರು: ಹಿಂದೂ ಸಮಾಜೋತ್ಸವಗಳು ಕೇವಲ ಬಲಾಢ್ಯರ ಹಿತಾಸಕ್ತಿಯನ್ನು ಕಾಯುತ್ತಿವೆ. ಆದರೆ ಬಸವಣ್ಣನವರ ಆಶಯವಿದ್ದದ್ದು ಶೋಷಿತರ ಸಬಲೀಕರಣದಲ್ಲಿ, ಸಮತಾವಾದದಲ್ಲಿ.

ಅಕ್ಕಮಹಾದೇವಿಯವರ ವಚನ: "ಲಿಂಗವ ಪೂಜಿಸಿ ಫಲವೇನಯ್ಯಾ, ಸಮರತಿ ಸಮಭಾವವಿಲ್ಲದನ್ನಕ್ಕ? ಜಂಗಮವ ಪೂಜಿಸಿ ಫಲವೇನಯ್ಯಾ, ಅರಿವು ಆಚಾರವಿಲ್ಲದನ್ನಕ್ಕ?" ಸಮಭಾವವಿಲ್ಲದ 'ಸಮಾಜೋತ್ಸವ'ಗಳು ಬಸವಣ್ಣನವರನ್ನು ಹೈಜಾಕ್ ಮಾಡುವ ಸಾಧನಗಳಷ್ಟೇ. ಶೋಷಿತ ವರ್ಗಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ಅಧಿಕಾರ ಸಿಗುವುದೇ ನಿಜವಾದ 'ಬಸವ ಪ್ರಜ್ಞೆ'.

4. ಶರಣೆಯರ ದಿಟ್ಟ ಸವಾಲು: ವೈದಿಕ ಷಡ್ಯಂತ್ರದ 'ಛಲ' ಮತ್ತು 'ಮೌಢ್ಯ'ವನ್ನು ಶರಣೆಯರು ಅಂದೇ ಪ್ರಶ್ನಿಸಿದ್ದರು. ಸತ್ಯಕ್ಕನವರ ವಚನ: "ಕಾಯಕದಲ್ಲಿ ನಿರತನಾದವನಿಗೆ ಕುಲವಿಲ್ಲ, ಛಲವಿಲ್ಲ, ಹೊಲಬಿಲ್ಲದ ಹಿರಿಯರಿಲ್ಲ, ಶಂಭುಜಕೇಶ್ವರ ಸಾಕ್ಷಿಯಾಗಿ." ಆಯ್ದಕ್ಕಿ ಲಕ್ಕಮ್ಮನವರ ವಚನ: "ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗೇಕೆ? ರೋಸವೆಂಬುದು ಯಮಧರ್ಮಂಗಲ್ಲದೆ ಶರಣರಿಗೇಕೆ?" ಅಧಿಕಾರಕ್ಕಾಗಿ ಧರ್ಮವನ್ನು ದಾಳವಾಗಿ ಬಳಸುವವರಿಗೆ ಶರಣರ ಈ ಮಾತುಗಳು ಕನ್ನಡಿ ಹಿಡಿಯುತ್ತವೆ.

ಉಪಸಂಹಾರ: ಇವನಾರವ ಎನ್ನದ ಪ್ರಜ್ಞೆ ಮೂಡಲಿ. ನಮಗೆ ಬೇಕಿರುವುದು ಕೇಸರಿಕರಣಗೊಂಡ 'ಬಸವಶೈವ' ಎಂಬ ಹಣೆಪಟ್ಟಿಯಲ್ಲ, ಸಂವಿಧಾನದ ಆಶಯಗಳನ್ನು ಹೊತ್ತ 'ಬಸವ ಪ್ರಜ್ಞೆ'. ಈ ನಾಡಿನ ಮೂಲನಿವಾಸಿಗಳು, ಶ್ರಮಿಕರು ಮತ್ತು ಅಹಿಂದ ವರ್ಗದವರು ಒಗ್ಗೂಡಿ ವೈದಿಕ ಷಡ್ಯಂತ್ರವನ್ನು ಮೆಟ್ಟಿ ನಿಂತು, ರಾಜಕಾರಣವನ್ನು ಶೋಷಿತರ ಏಳಿಗೆಯ ಸಾಧನವಾಗಿ ಬಳಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಅಂತಿಮ ಗುರಿ ಬಸವಣ್ಣನವರ ಈ ವಚನದಲ್ಲಿ ಅಡಕವಾಗಿದೆ:

ಬಸವಣ್ಣನವರ ವಚನ: "ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ." ಯಾವಾಗ ರಾಜಕಾರಣವು 'ಪರ' ಮತ್ತು 'ನಮ್ಮವ' ಎಂಬ ಭೇದವಿಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನ ಅಪ್ಪಿಕೊಳ್ಳುತ್ತದೋ, ಅಂದೇ ಬಸವ ಪ್ರಜ್ಞೆ ಗೆದ್ದಂತೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST