ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ 18 ಹಾಗೂ 19ನೇ ವಾರ್ಡ್ ಸೇರಿದಂತೆ ಹಲವು ವಾರ್ಡ್ ಗಳಲ್ಲಿ ಮೂಲಭೂತ ಸೌಲಭ್ಯಗಳ ಸಮಸ್ಯೆ ಸಾಕಷ್ಟು ಇದೆ. ಸ್ವಚ್ಛೆತೆ, ಕುಡಿಯುವ ನೀರಿನ ಪೂರೈಕೆ, ಜೆಜೆಎಂ ಕಾಮಗಾರಿ ಹಾಗೂ ಶೌಚಾಲಯ ಸಂಬಂಧ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಪೌರಾಯುಕ್ತ ರವಿ ಶಿರಗುಪ್ಪಿ ಅವರಿಗೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆ ಬಂದ್ ಮಾಡಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಲಾಯಿತು.
ಈ ವಾರ್ಡ್ ನಲ್ಲಿ ಸಾರ್ವಜನಿಕ ಪಂಪ್ ಸೆಟ್ ಇದ್ದು, ಒಂದು ತಿಂಗಳ ಹಿಂದೆಯೇ ಮೋಟರ್ ಸುಟ್ಟು ಹೋಗಿದೆ. ಹೀಗಿದ್ದರೂ ಅದನ್ನು ಸರಿಪಡಿಸುವ ಕೆಲಸ ಮಾಡಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೂಡಲೇ ಈ ಕುರಿತು ಗಮನ ಹರಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಸಂತೋಷ ಮನಗೂಳಿ ಆಗ್ರಹಿಸಿದರು. ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ ಮಾತನಾಡಿ, ಸಿಂದಗಿ ನಗರದ ಬಹುತೇಕ ವಾರ್ಡ್ ಗಳಲ್ಲಿ ಮೂಲಭೂತ ಸಮಸ್ಯೆ ತಾಂಡವಾಡುತ್ತಿದೆ. ಅಧಿಕಾರಿಗಳು ವಾರ್ಡ್ ಗಳಿಗೆ ತೆರಳಿ ಜನರ ಸಮಸ್ಯೆ ತಿಳಿದುಕೊಂಡು ಪರಿಹರಿಸುವ ಕೆಲಸ ಮಾಡಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಸಂಘಟನೆಯ ಕಾರ್ಯಧ್ಯಕ್ಷ ಸಂತೋಷ ತಳವಾರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕಾಧ್ಯಕ್ಷ ಬಸವರಾಜ ರಂಜುಣಗಿ, ನಾಗಣ್ಣ ಪಡೇಕನೂರ, ಲಾಳೆಮಶಾಕ ವಾಲಿಕಾರ, ಬಸವರಾಜ ಗುತ್ತೆದಾರ, ಶಿಂಕದಾರ ಮಾಶಾಳಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


