ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ದಿನ ಬೆಳಗಾದರೆ ಆರ್‌ಎಸ್‌ಎಸ್ ಜಪ ಮಾಡುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ದುರಾಡಳಿತ ಮುಚ್ಚಿಕೊಳ್ಳಲು ಸಂಘಟನೆಯನ್ನು ಟೀಕಿಸುವುದನ್ನು ನಿಲ್ಲಿಸಿ ಎಂದು ಸಿಂದಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಅವರು ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಆರ್‌ಎಸ್‌ಎಸ್ ದೇಶದ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವ ಶಿಸ್ತಿನ ದೇಶಭಕ್ತ ಸಂಘಟನೆ. ಇಂತಹ ಸಂಘಟನೆಯ ವಿರುದ್ಧ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಸತತವಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ.
ಸಚಿವ ಪ್ರಿಯಾಂಕ್ ಖರ್ಗೆ ಅವರೇ ಆರ್‌ಎಸ್‌ಎಸ್ ಎಂದು ಹಗಲು ರಾತ್ರಿ ಜಪ ಮಾಡುವುದನ್ನು ಬಿಟ್ಟು, ರಾಜ್ಯದ ಅಭಿವೃದ್ಧಿ ಹಾಗೂ ತಮ್ಮ ಇಲಾಖೆಯ ಕಾರ್ಯಗಳೆಡೆಗೆ ನಿಮ್ಮ ಚಿತ್ತವಿರಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಚಿವರು ದಿನಬೆಳಗಾದರೆ ಆರ್‌ಎಸ್‌ಎಸ್ ಜಪ ಮಾಡುತ್ತಿದ್ದಾರೆ. ದೇಶಪ್ರೇಮ ಬಿತ್ತುತ್ತಿರುವ ಸಂಘಟನೆಯನ್ನು ಟೀಕಿಸುವ ಮೊದಲು, ಖರ್ಗೆ ಅವರು ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಿ. ಸಚಿವರ ಇಂತಹ ಸಮಾಜ ಒಡೆಯುವ ಹೇಳಿಕೆಗಳನ್ನು ಸಿಂದಗಿ ಕ್ಷೇತ್ರದ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಧೈರ್ಯವಿದ್ದರೆ ತಮ್ಮ ಸರ್ಕಾರದ ಸಾಧನೆಗಳ ಮೇಲೆ ರಾಜಕಾರಣ ಮಾಡಲಿ. ಅದನ್ನು ಬಿಟ್ಟು ಆರ್‌ಎಸ್‌ಎಸ್ ಸಂಘಟನೆಯನ್ನು ಗುರಿಯಾಗಿಸಿಕೊಂಡು ಹೈಕಮಾಂಡ್ ಮನವೊಲಿಸುವ ರಾಜಕಾರಣ ಮಾಡುವುದನ್ನು ಬಿಡಲಿ. ಆರ್‌ಎಸ್‌ಎಸ್ ಯಾವುದೇ ನೋಂದಣಿ ಇಲ್ಲದ ಸಂಸ್ಥೆ ಎಂದು ಸಚಿವರು ಪತ್ರ ಬರೆಯುತ್ತಿರುವುದು ಅವರ ಅಜ್ಞಾನವನ್ನು ತೋರಿಸುತ್ತದೆ. ಸಂಘಟನೆಯು ದೇಶದ ವಿಪತ್ತುಗಳ ಸಮಯದಲ್ಲಿ ಯಾವುದೇ ಪಲಾಫೇಕ್ಷವಿಲ್ಲದೇ ಅಪಾಯದ ಅಂಚಿನಲ್ಲಿರುವ ಜನರಿಗೆ ನೆರವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಇಂತಹ ಲಘು ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ಅಭಿವೃದ್ಧಿ ರಾಜಕಾರಣದೆಡೆಗೆ ಗಮನ ಹರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



