ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ ಖ್ಯಾತ ಹಿರಿಯ ಶಿಕ್ಷಕ ಹೆಚ್.ಟಿ ಕುಲಕರ್ಣಿ(76) ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ನಸುಕಿನಜಾವ 6.30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ನಗರದ ಗುರುಕೃಪ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಾಲ್ಕೈದು ದಶಕಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಣದ ಬೀಜ ಬಿತ್ತಿ ಅವರನ್ನು ಬೆಳೆಸಿದ್ದಾರೆ. ಇವರ ಸೇವೆಗೆ ಹಲವಾರ ಪ್ರಶಸ್ತಿಗಳು ಸಂದಿವೆ. ನಗರದ ಊರಿನ ಹಿರಿಯಮಠದಿಂದ ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನೀಡುವ ‘ಶಾಂತಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಓರ್ವ ಆದರ್ಶ ಶಿಕ್ಷಕ ಹೇಗಿರಬೇಕು ಅನ್ನೋದಕ್ಕೆ ಹೆಚ್.ಟಿ ಕುಲಕರ್ಣಿ ಅವರು ಸಾಕ್ಷಿಯಾಗಿದ್ದಾರೆ. ತಮ್ಮ ಮರಣಾನಂತರ ದೇಹವನ್ನು ವೈದ್ಯಕೀಯ ಉದ್ದೇಶದ ಕಾರಣಕ್ಕೆ ದಾನ ಮಾಡುವ ಮೂಲಕ ಸಾವಿನ ನಂತರವೂ ಪರೋಪಕಾರಿಯಾಗಿದ್ದಾರೆ. ನಗರದಲ್ಲಿ ಮೆರವಣಿಗೆ ನಡೆಸಿದ ಬಳಿಕ ಸಂಜೆ 5 ಗಂಟೆಗೆ ವಿಜಯಪುರದ ಬಿಎಲ್ ಡಿಇ ಆಸ್ಪತ್ರೆಗೆ ದೇಹವನ್ನು ಹಸ್ತಾಂತರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಮೃತರಿಗೆ ಪತ್ನಿ, ಇಬ್ಬರು ಹೆಣ್ಮಕ್ಕಳು, ಓರ್ವ ಪುತ್ರ ಇದ್ದಾರೆ. ಹೆಚ್.ಟಿ.ಕುಲಕರ್ಣಿ ಶಿಕ್ಷಕರ ನಿಧನಕ್ಕೆ ಅಪಾರ ಬಂಧು, ಬಳಗ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.



